ಉಕ್ರೇನ್ ಯುದ್ಧ ಜಾಗತಿಕ ಪರಿಣಾಮ ಬೀರುವುದರಿಂದ ದಿನನಿತ್ಯದ ಆಹಾರಕ್ಕೆ ಪರದಾಡುವವರ ಸಂಖ್ಯೆಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತ ಪಡಿಸಿದೆ.ಹವಾಮಾನ ವೈಪರೀತ್ಯಗಳು, ಕೊರೊನಾ ಸಾಂಕ್ರಾಮಿಕದ ಆರ್ಥಿಕ ಪರಿಣಾಮ, ಉಕ್ರೇನ್ ಸಂಘರ್ಷಗಳು ಮೂರು ವಿಷಕಾರಿ ಸಂಯೋಜನೆಯಾಗಿದ್ದು, 2021 ರಲ್ಲಿ 53 ದೇಶಗಳ ಸುಮಾರು 193 ಮಿಲಿಯನ್ ಜನರು ತೀವ್ರ ಆಹಾರ ಕೊರತೆ ಅನುಭವಿಸಿದರು. ಈ ವರ್ಷ ಅದಕ್ಕೆ ಮತ್ತೆ 40 ಮಿಲಿಯನ್ ಜನ ಸೇರ್ಪಡೆಯಾಗಿದ್ಧಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ವಿಶ್ವ ಆಹಾರ ಕಾರ್ಯಕ್ರಮ ಮತ್ತು ಯುರೋಪಿಯನ್ ಯೂನಿಯನ್ ಜಂಟಿಯಾಗಿ ತಯಾರಿಸಿದ ಆಹಾರ ಬಿಕ್ಕಟ್ಟಿನ ಜಾಗತಿಕ ವರದಿಯಲ್ಲಿ ಈ ಅಂಕಿಅಂಶಗಳು ಕಾಣಿಸಿಕೊಂಡಿವೆ.ವರದಿಯ ಪ್ರಕಾರ ಅಫ್ಘಾನಿಸ್ತಾನ, ಕಾಂಗೋ, ಇಥಿಯೋಪಿಯಾ, ನೈಜೀರಿಯಾ, ದಕ್ಷಿಣ ಸುಡಾನ್, ಸಿರಿಯಾ ಮತ್ತು ಯೆಮೆನ್ ಸೇರಿದಂತೆ ಸುದೀರ್ಘ ಸಂಘರ್ಷಗಳನ್ನು ಅನುಭವಿಸುತ್ತಿರುವ ದೇಶಗಳು ಆಹಾರದ ಕೊರತೆ ಅನುಭವಿಸುತ್ತಿವೆ.
ದೀರ್ಘಕಾಲದ ಬರ, ಹೆಚ್ಚುತ್ತಿರುವ ಆಹಾರ ಬೆಲೆಗಳು ಮತ್ತು ನಿರಂತರ ಹಿಂಸಾಚಾರದಿಂದಾಗಿ ಸೊಮಾಲಿಯಾ 2022 ರಲ್ಲಿ ವಿಶ್ವದ ಅತ್ಯಂತ ಕೆಟ್ಟ ಆಹಾರ ಬಿಕ್ಕಟ್ಟನ್ನು ಎದುರಿಸಲಿದೆ ಎಂದು ವರದಿ ಮುನ್ಸೂಚನೆ ನೀಡಿದೆ. ಸೋಮಾಲಿದಲ್ಲಿ 6 ಮಿಲಿಯನ್ ಜನ ತೀವ್ರ ಆಹಾರ ಬಿಕ್ಕಟ್ಟಿಗೆ ಸಿಲುಕಬಹುದು.
ಆಹಾರ ಉತ್ಪಾದನೆಗೆ ಗ್ರಾಮೀಣ ಭಾಗವನ್ನು ಬೆಂಬಲಿಸದಿದ್ದರೆ ಹಸಿವು, ಕುಸಿಯುವ ಜೀವನ ಮಟ್ಟ ವಿನಾಶಕ ಪರಿಣಾಮ ಸೃಷ್ಟಿಸಲಿದೆ. ಮುಂದಿನ ಅನಾವುತಗಳನ್ನು ತಡೆಯಲು ಈಗಿನಿಂದಲೇ ಬೃಹತ್ ಪ್ರಮಾಣದ ತುರ್ತು ಕ್ರಮಗಳ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.ಗೋ, ರಸಗೊಬ್ಬರ ಮತ್ತು ಇತರ ಆಹಾರ ಪೂರೈಕೆಗಾಗಿ ಉಕ್ರೇನ್ ಮತ್ತು ರಷ್ಯಾವನ್ನು ಅವಲಂಬಿಸಿರುವ ಸೋಮಾಲಿಯಾ ಹಾಗೂ ಅನೇಕ ಆಫ್ರಿಕನ್ ದೇಶಗಳಿಗೆ ಪ್ರಸ್ತುತ ನಡೆಯುತ್ತಿರುವ ಯುದ್ಧ ಸಂಕಷ್ಟ ತಂದಿಟ್ಟಿದೆ.ಹೆಚ್ಚುತ್ತಿರುವ ಆಹಾರ ಹಾಗೂ ತೈಲ ಬೆಲೆಗಳು, ಹಣದುಬ್ಬರದಿಂದಾಗಿ 47 ಮಿಲಿಯನ್ ಜನರು ಬಿಕ್ಕಟ್ಟಿಗೆ ಸಿಲುಕಿದ್ದಾರೆ.
ಇದಕ್ಕೂ ಮೊದಲು ಕೋವಿಡ್ ನಿಂದಾಗಿ ಆದಾಯ ಕುಸಿತವಾಗಿ ಆಹಾರದ ಬೆಲೆಗಳು 10 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದವು. ಇಂಧನ ಬೆಲೆಗಳು ಏಳು ವರ್ಷಗಳಲ್ಲೇ ಗರಿಷ್ಠ ಮಟ್ಟದಲ್ಲಿವೆ ಎಂದು ವರದಿ ವಿವರಿಸಿದೆ.ಉಕ್ರೇನ್ ಯುದ್ಧ ಧಾನ್ಯಗಳು ಮತ್ತು ಸಸ್ಯಜನ್ಯ ಎಣ್ಣೆಗಳಂತಹ ಸರಕುಗಳ ಬೆಲೆಗಳನ್ನು ದಾಖಲೆಯ ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿವೆ. ಹಸಿವು ಮತ್ತು ಅಪೌಷ್ಟಿಕತೆ ಹೆಚ್ಚಾಗುತ್ತಿದೆ.
2016ರಲ್ಲಿ ಶೇ.11ರಷ್ಟು ಜನ ಆಹಾರ ಅಭದ್ರತೆಯನ್ನು ಅನುಭವಿಸಿದ್ದರೆ, 2021ರಲ್ಲಿ ಅದು ಶೇ. 22 ಏರಿತ್ತು. ತುರ್ತು ಸಂದರ್ಭಗಳ ಬಳಕೆಗಾಗಿ 2021 ರಲ್ಲಿ 8.1 ಶತಕೋಟಿ ಡಾಲರ್ ನಿ ತುರ್ತು ಕೆಲಸಕ್ಕೆ ಲಭ್ಯವಿತ್ತು, 2017 ಕ್ಕಿಂತಲೂ ಇದು 25ರಷ್ಟು ಕಡಿಮೆಯಾಗಿದೆ ಎಂದು ವಿವರಿಸಲಾಗಿದೆ.
ಆಹಾರ ಭದ್ರತೆಯನ್ನು ನಿಗಿಸಲು ಮಳೆಗಾಲ ಆರಂಭದಲ್ಲಿ ನಾಟಿಗಾಗಿ 1.5 ಶತಕೋಟಿ ಡಾಲರ್ ನೆರವು ನೀಡುವ ಅಗತ್ಯ ಇದೆ. ಇದನ್ನು ಈಗ ನಿರ್ಲಕ್ಷ್ಯಿಸಿದರೆ ಮುಂದಿನ ದಿನಗಳಲ್ಲಿ ಸಾವಿರ ಪಟ್ಟು ಹೆಚ್ಚು ಖರ್ಚು ಮಾಡಬೇಕಿದೆ ಎಂದು ವಿಶ್ವಸಂಸ್ಥೆ ಪ್ರಮುಖರು ಎಚ್ಚರಿಸಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5