ತಿಪಟೂರು: ಹಿಂದುಳಿದ ಸಮುದಾಯಗಳು ಶಿಕ್ಷಣ, ಸಂಘಟನೆ, ಹೋರಾಟ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ, ಸಂಘಟನೆ ಇಲ್ಲದೆ, ಶಕ್ತಿ ಇಲ್ಲ ಎಂದು ದಾಬಸಪೇಟೆ ಹೆಗ್ಗುಂದದ ಶ್ರೀ ಹೊನಕಲ್ಲು ಮಲ್ಲೇಶ್ವರ ಪೀಠಾಧ್ಯಕ್ಷರಾದ ಡಾ.ಬಸವ ರಮಾನಂದ ಸ್ವಾಮೀಜಿ ಹೇಳಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದ ಶ್ರೀಗಳು, ಸಂಘಟನೆ ಎಂಬುದು ಜೇನುಗೂಡಿನಂತೆ ಇರಬೇಕು, ಶಿಕ್ಷಣದಲ್ಲಿ ಪ್ರಜ್ಞಾವಂತರಾದರೆ ಅಭಿವೃದ್ಧಿ ಹೊಂದಲು ಸಾಧ್ಯ, ಆತ್ಮಶಕ್ತಿ ಕುಗ್ಗಿಸಿಕೊಳ್ಳದೆ ಹೋರಾಟ ಮಾಡುವ ಮನೋಭಾವ ನಮ್ಮಲ್ಲಿ ಬರಬೇಕು, ಚುನಾವಣೆ ಸಂದರ್ಭದಲ್ಲಿ ನಾವು ಹಾಕುವ ಮತಕ್ಕೆ ಶಕ್ತಿ ಬಹಳಷ್ಟು ಇದೆ, ನಮ್ಮ ಸಮಸ್ಯೆ ಕೇಳುವ ಯೋಗ್ಯರಿಗೆ ಮತ ಹಾಕಬೇಕು, ಯಾವುದೇ ಮೂಲಭೂತ ಸಮಸ್ಯೆ ಇದ್ದರೂ ಕೂಡ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಪ್ರಶ್ನಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು. ಕಲ್ಪತರು ನಾಡಿನಲ್ಲಿ ಕೆ.ಟಿ.ಶಾಂತಕುಮಾರ್ ಅವರು ಜನ ನಾಯಕರಾಗಿ ಜನ ಸೇವೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ, ಈ ತಾಲೂಕಿನ ಮನೆ ಮಗನಂತಾಗಿರುವ ಕೆ.ಟಿ.ಶಾಂತಕುಮಾರ್ ಅವರಿಗೆ ಇನ್ನಷ್ಟು ಕೆಲಸ ಮಾಡಲು ಶಕ್ತಿ ತುಂಬಬೇಕು ಎಂದರು.
ಕುಪ್ಪೂರು ತಮ್ಮಡಿ ಹಳ್ಳಿಯ ಸುಕ್ಷೇತ್ರ ಅಧ್ಯಕ್ಷರಾದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿ ಕೇಂದ್ರ ಮಹಾಸ್ವಾಮಿಜಿ ಮಾತನಾಡಿ, ಜೀವನ ಸಾರ್ಥಕವಾಗಲು ಮನುಷ್ಯನಾದವನು ನಿಸ್ವಾರ್ಥ ಸೇವೆ ಮಾಡಬೇಕು. ತಾಲೂಕಿನಲ್ಲಿ ಮೂಲಸೌಕರ್ಯದಿಂದ ವಂಚಿತರಾದವರಿಗೆ ಕೆ.ಟಿ. ಶಾಂತಕುಮಾರ್ ರವರು ಆಶ್ರಯದಾತರಾಗಿದ್ದಾರೆ. ನಿಜವಾದ ನಾಯಕ ಲಕ್ಷಣದ ವ್ಯಕ್ತಿತ್ವ ಶಾಂತಕುಮಾರ್ ಅವರಲ್ಲಿ ಇದೆ ಎಂದರು.
ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಮಹಾಸ್ವಾಮೀಜಿ ಮಾತನಾಡಿ, ಕಲ್ಪತರು ನಾಡಿನಲ್ಲಿ ಸಮಾಜಮುಖಿ ಕಾರ್ಯದಲ್ಲಿ ಬಹಳ ವರ್ಷಗಳಿಂದ ರೈತಾಪಿ ವರ್ಗ ಸೇರಿದಂತೆ, ಬಡ ಮಕ್ಕಳಿಗೆ ಅನೇಕ ಸಹಾಯ ಸಹಕಾರವನ್ನುಶಾಂತಕುಮಾರ್ ಅವರು ಮಾಡಿರುವುದನ್ನು ನಾವು ಕೇಳಿದ್ದೇವೆ. ಕರೋನಾ ಸಂದರ್ಭದಲ್ಲಿ ಶಾಂತಕುಮಾರ್ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳು ಜನತೆ ಮರೆತಿಲ್ಲ. ಮಕ್ಕಳಿಗೆ ಪಠ್ಯಪುಸ್ತಕ, ಪ್ರತಿಭಾ ಪುರಸ್ಕಾರ ಮತ್ತಿತರ ಸಮಾಜಮುಖಿ ಕಾರ್ಯ ಶಾಂತಕುಮಾರ್ ರವರು ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ತಾಲೂಕು ಕುರುಬ ಸಮಾಜದ ಅಧ್ಯಕ್ಷ ಚಂದ್ರೇಗೌಡ ಮಾತನಾಡಿ, ಸಣ್ಣಪುಟ್ಟ ಸಮುದಾಯಗಳ ಭವನಗಳ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಸರ್ಕಾರದಿಂದ ಹಣ ನೀಡಲು ಮೀನಾ ಮೇಷ ಎಣಿಸುತ್ತಾರೆ. ಅಹಿಂದ ಸಮಾಜ ಒಗ್ಗೂಡಬೇಕು ಎಂದರು.
ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಯಾವುದೇ ಅಭ್ಯರ್ಥಿ ಗೆಲುವು ಪಡೆಯಬೇಕಾದರೆ ಹಿಂದುಳಿದ ವರ್ಗಗಳ ಮತ ನಿರ್ಣಾಯಕ ಪಾತ್ರ ವಹಿಸುತ್ತದೆ. ಹಿಂದುಳಿದ ಸಮಾಜಗಳು ಒಗ್ಗೂಡ ಬೇಕು, ಸಂಘಟನೆ ಬಲವಾದರೆ ಏನನ್ನು ಬೇಕಾದರೂ ಪಡೆಯಲು ಸಾಧ್ಯ, ತಾಲೂಕಿನ ಜನಪ್ರತಿನಿಧಿಗಳು ಹಿಂದುಳಿದ ಸಮುದಾಯಕ್ಕೆ ಕೇವಲ ಆಶ್ವಾಸನೆ ನೀಡಿದ್ದು ಬಿಟ್ಟರೆ, ಸಮುದಾಯಗಳ ಅಭಿವೃದ್ಧಿಗೆ ಯಾವುದೇ ನೆರವು ಇದುವರೆಗೂ ನೀಡಿಲ್ಲ, ಕೇವಲ ಗುದ್ದಲಿ ಪೂಜೆ ನೆಪದಲ್ಲಿ ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ಗಿಮಿಕ್ ಮಾಡಿದ್ದು ಬಿಟ್ಟರೆ, ಹಿಂದುಳಿದ ವರ್ಗದ ಸಮುದಾಯಗಳ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ, ತಾಲೂಕಿನ ನೂರಾರು ಶಾಲೆಗಳು ಇಂದಿಗೂ ಕೂಡ ಶಿಥಿಲಾವಸ್ಥೆಯಲ್ಲಿವೆ, ಆದರೆ ಶಿಕ್ಷಣ ಮಂತ್ರಿಗಳಿಗೆ ಯಾವುದು ಗಮನಕ್ಕೆ ಬರುತ್ತಿಲ್ಲವೇ? ಕಳೆದ ಹಲವಾರು ವರ್ಷಗಳಿಂದ ನಾನು ತಾಲೂಕಿನ ಜನತೆಯ ಜೊತೆ ನಿರಂತರವಾಗಿ ಜೊತೆಯಾಗಿ ಇದ್ದೇನೆ, ಬಡತನದಲ್ಲಿ ಹುಟ್ಟಿದ ನನಗೆ ಕಷ್ಟ ಅಂದರೆ ಏನು ಎಂದು ತಿಳಿದಿದೆ, ಈ ತಾಲೂಕಿನಲ್ಲಿ ಸಾವಿರಾರು ನೊಂದ ಕುಟುಂಬಗಳು ಇವೆ, ತಾಲೂಕಿನ ಹೊಂದಾಣಿಕೆ ರಾಜಕಾರಣದಿಂದಾಗಿ ಬಡವರಿಗೆ ನ್ಯಾಯ ದೊರಕುತ್ತಿಲ್ಲ, ತಾಲೂಕಿನ ಜನರು ನನಗೆ ಶಕ್ತಿ ತುಂಬಿದರೆ ದಿನದ 24 ಗಂಟೆ ನಾನು ಸೇವೆ ಮಾಡಲು ಸಿದ್ದನಾಗಿದ್ದೇನೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ನನಗೆ ಒಂದು ಅವಕಾಶ ತಾಲೂಕಿನ ಜನತೆ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನ ಹಿಂದುಳಿದ ಸಮುದಾಯ ಭವನಗಳ ನಿರ್ಮಾಣಕ್ಕೆ ಕೆ.ಟಿ.ಶಾಂತಕುಮಾರ್ ವೈಯಕ್ತಿಕವಾಗಿ ಧನಸಹಾಯ ನೀಡಿದರು, ಅಲ್ಲದೆ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಿಂದುಳಿದ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿಕಲಾಂಗ ಮಕ್ಕಳಿಗೆ ಸಹಾಯ ನೀಡಿದರು, ಕಾರ್ಯಕ್ರಮದಲ್ಲಿ ಹಿಂದುಳಿದ ಸಮುದಾಯದ ಮುಖಂಡರಾದ ಶಿವಪುರದ ಸಿದ್ದರಾಮಯ್ಯ, ಲಿಂಗಯ್ಯ, ನಿಜಲಿಂಗಪ್ಪ ,ನಾಗರಾಜು, ಬಾಲರಾಜು, ಪ್ರಕಾಶ್, ಪರಮೇಶ ಆಚಾರ್, ಚಂದ್ರಣ್ಣ, ಲೋಕೇಶ್, ಉಗ್ರಯ್ಯ ಸೇರಿದಂತೆ, ಅಪಾರ ಸಂಖ್ಯೆಯಲ್ಲಿ ಹಿಂದುಳಿದ ಸಮುದಾಯದ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy