ಕೊರಟಗೆರೆ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಸೆರೆಮನೆ ವಾಸದಲ್ಲಿದ್ದ ಆರೋಪಿ ದರ್ಶನ್ ಬೆನ್ನುನೋವಿನಿಂದ ಬಳಲುತ್ತಿದ್ದ ಕಾರಣ ಶಸ್ತ್ರಚಿಕಿತ್ಸೆಗಾಗಿ ಮಂಗಳವಾರ ಹಿರಿಯ ವಕೀಲ ಸಿ.ವಿನಾಗೇಶ್ ಮಧ್ಯಾಂತರ ಜಾಮೀನಿಗೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಬುಧವಾರ ಬೆ.10:30ಕ್ಕೆ ಉಚ್ಚ ನ್ಯಾಯಾಲಯ 6ವಾರಗಳ ಮಧ್ಯಾಂತರ ಜಾಮೀನು ನೀಡಿದ ಬೆನ್ನಲ್ಲೆ ಇಲ್ಲಿನ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿ ನ್ಯಾಯಾಲಯಕ್ಕೆ ಕೃತಜ್ಞತೆ ತಿಳಿಸಿದ್ದಾರೆ.
ಅಡವಿ ಸಿನಿಮಾದ ನಿರ್ಮಾಪಕ ಟೈಗರ್ ನಾಗರಾಜ್ ಮಾತನಾಡಿ, ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕನ್ನಡ ಚಿತ್ರರಂಗದಲ್ಲಿ ಸಿನಿಮಾದ ಮುಖಾಂತರ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಆದರೆ ಇತ್ತೀಚಿಗೆ ಕಳೆದ ಕೆಲವು ತಿಂಗಳ ಹಿಂದೆ ಕೊಲೆ ಪ್ರಕರಣದಲ್ಲಿ ಸೆರೆಮನೆ ವಾಸದಲ್ಲಿದ್ದ ವೇಳೆ ಬೆನ್ನು ನೋವಿನ ಸಮಸ್ಯೆ ತೀವ್ರಗೊಂಡ ಕಾರಣ ಹೈಕೋರ್ಟ್ ನ್ಯಾಯಧೀಶರು ವೈದ್ಯಕೀಯ ವರದಿಯನ್ನು ಗಮನಿಸಿ ದರ್ಶನ್ ಅವರಿಗೆ 6 ವಾರಗಳವೆರೆಗೆ ಮಧ್ಯಾಂತರ ಜಾಮೀನು ನೀಡಿ ಅಭಿಮಾನಿಗಳಿಗೆ ದೀಪಾವಳಿ ಹಬ್ಬಕ್ಕೆ ಉಡುಗೊರೆ ನೀಡಿದ್ದಾರೆ. ದರ್ಶನ್ ಆರೋಗ್ಯ ಸಮಸ್ಯೆಯಿಂದ ಆದಷ್ಟು ಬೇಗ ಗುಣಮುಖರಾಗಲಿ ಎಂದು ಹೇಳಿದರು.
ದರ್ಶನ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ದೇವರಾಜ್ ಕೆ.ಎನ್. ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನೇ ನನ್ನ ಸೆಲೆಬ್ರೆಟಿಸ್ ಎಂದ ಏಕೈಕ ನಟ ದರ್ಶನ್ ರವರು. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಸೆರೆಮನೆ ವಾಸ ಅನುಭವಿಸುತ್ತಿದ್ದ ದರ್ಶನ್ ಅಣ್ಣನವರಿಗೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ವೈದ್ಯಕೀಯ ವರದಿಯಂತೆ ಶಸ್ತ್ರಚಿಕಿತ್ಸೆಗಾಗಿ 6 ವಾರಗಳ ಮಧ್ಯಾಂತರ ಜಾಮೀನು ನೀಡಿದ್ದು ಅಭಿಮಾನಿಗಳಿಗೆ ಖುಷಿಯನ್ನು ಉಂಟು ಮಾಡಿದೆ. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಅಭಿಮಾನಿಗಳ ಪರವಾಗಿ ಕೃತಜ್ಞತೆ ತಿಳಿಸಲು ಬಯಸುತ್ತೇವೆ. ಆದಷ್ಟು ಬೇಗ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುವುದಾಗಿ ತಿಳಿಸಿದರು.
ಪ.ಪಂ ಸದಸ್ಯ ಕೆ.ಎನ್. ನಟರಾಜು ಮಾತನಾಡಿ, ಅಭಿಮಾನಿಗಳ ಪ್ರೀತಿಯ ದಾಸ ದರ್ಶನ್ ಸಂಕಷ್ಟದಲ್ಲಿದ್ದ ಸಾಕಷ್ಟು ಬಡ ಕುಟುಂಬಗಳಿಗೆ, ಅನಾಥಶ್ರಮ, ವೃದ್ಧಾಶ್ರಮ, ಮಠಾಮಾನ್ಯಗಳಿಗೆ ಸಹಾಯ ಮಾಡಿದ್ದಾರೆ. ಪ್ರತಿಯೊಬ್ಬ ಮನುಷ್ಯನು ತಪ್ಪು ಮಾಡುವುದು ಸಹಜ. ಹೈಕೋರ್ಟ್ ನೀಡಿರುವ ಮಧ್ಯಾಂತರ ಜಾಮೀನು ತೀರ್ಪು ಸ್ವಾಗತರ್ಹ, ಬೆನ್ನು ನೋವಿನ ಸಮಸ್ಯೆಯಿಂದ ಆದಷ್ಟು ಬೇಗ ಗುಣಮುಖರಾಗಿ ಕೊಲೆ ಪ್ರಕರಣದ ಆರೋಪದಿಂದ ಹೊರಬರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಭೀಮರಾಜು, ಉಪಾಧ್ಯಕ್ಷ ದರ್ಶನ್, ದೀಪು, ಚಿರಂಜೀವಿ, ಜನಾರ್ಧನ್, ಲಿಂಗರಾಜು, ಶಿವರಾಜು, ಮಾರುತಿ, ನವೀನ್, ಅಂಬಿ, ಮನು, ನಂದನ್, ದರ್ಶನ್, ರೋಹಿತ್, ವಿಜಯ್ ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q