ಮೈಸೂರು: ರಾಜ್ಯದ ಶಾಲಾ ಶಿಕ್ಷಣದಲ್ಲಿ ಹಿಂದಿ ಭಾಷೆಯ ಹೇರಿಕೆಗೆ ತಡೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಯನ್ನು ಕಡ್ಡಾಯಗೊಳಿಸದಿರಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಮೈಸೂರಿನಲ್ಲಿ ತಿಳಿಸಿದ್ದಾರೆ.
“ನಾವು ಓದುವಾಗ ಹಿಂದಿ ಭಾಷೆ ಕಡ್ಡಾಯ ಇರಲಿಲ್ಲ. ಈಗಲೂ ಸಹ ಪರೀಕ್ಷೆಯಲ್ಲಿ ಹಿಂದಿ ಕಡ್ಡಾಯವಾಗಬಾರದು ಎಂಬುದು ನಮ್ಮ ನಿಲುವು. ನಾನು ಹಿಂದಿ ಕಲಿಯಬಾರದು ಎಂದು ಹೇಳುತ್ತಿಲ್ಲ, ಆದರೆ ಅದನ್ನು ಕನ್ನಡಿಗರ ಮೇಲೆ ಕಡ್ಡಾಯವಾಗಿ ಹೇರಬಾರದು” ಎಂದು ಸಿಎಂ ಸ್ಪಷ್ಟಪಡಿಸಿದರು.
ಸರ್ಕಾರದ ಹೊಸ ತೀರ್ಮಾನದಂತೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಒಟ್ಟು ಅಂಕಗಳನ್ನು 625 ರಿಂದ 525ಕ್ಕೆ ಇಳಿಸಲಾಗಿದೆ. ಈ ವರ್ಷದಿಂದಲೇ ತೃತೀಯ ಭಾಷೆಯ ಅಂಕಗಳನ್ನು ಫಲಿತಾಂಶಕ್ಕೆ ಪರಿಗಣಿಸದಿರಲು ನಿರ್ಧರಿಸಲಾಗಿದೆ.
ಈ ಹೊಸ ನಿಯಮವು ಪ್ರಸಕ್ತ ಸಾಲಿನಿಂದಲೇ ಜಾರಿಗೆ ಬರಲಿದೆ. ಸರ್ಕಾರದ ಈ ನಿರ್ಧಾರವನ್ನು ಕೆಲವರು ವಿರೋಧಿಸಬಹುದು, ಆದರೆ ರಾಜ್ಯದ ಹಿತದೃಷ್ಟಿಯಿಂದ ಎಲ್ಲವನ್ನೂ ಪರಾಮರ್ಶಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯವನ್ನು ಡ್ರಗ್ಸ್ ಮುಕ್ತಗೊಳಿಸಲು ಸರ್ಕಾರ ಸಮರ ಸಾರಿದೆ. ಮೈಸೂರಿನಲ್ಲಿ ಪತ್ತೆಯಾಗಿರುವ ಡ್ರಗ್ಸ್ ಜಾಲದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
“ಸರ್ಕಾರದ ನಿರ್ಧಾರಕ್ಕೆ ಶೇ.100 ರಷ್ಟು ಬೆಂಬಲ ಸಿಗುವುದು ಕಷ್ಟ. ವಿರೋಧಿಸುವವರು ಇರುತ್ತಾರೆ, ಸ್ವಾಗತಿಸುವವರೂ ಇರುತ್ತಾರೆ. ಆದರೆ ನಾವು ಕನ್ನಡದ ಅಸ್ಮಿತೆ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ತೀರ್ಮಾನ ಮಾಡಿದ್ದೇವೆ” ಎಂದು ಸಿದ್ದರಾಮಯ್ಯ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


