ಪಾವಗಡ: ಹಿಂದೂ ಮಹಾ ಗಣಪತಿ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಮಹಾ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಮುಸ್ಲಿಂ ಸಮಾಜದ ಅನೇಕ ಮಂದಿ ಯುವಕರಿಂದ ಸುಮಾರು ಎಂಟುನೂರಕ್ಕಿಂತ ಹೆಚ್ಚು ಮಂದಿಗೆ ಕೇಸರಿಬಾತ್, ಪಲವ್ ಹಾಗೂ ಕುಡಿವ ನೀರಿನ ಪಾಕೇಟ್ ವಿತರಿಸಿ ಶುಭಕೋರಿದ ಪ್ರಸಂಗ ಮಂಗಳವಾರ ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ನಡೆಯಿತು.
ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿ ಕೇಂದ್ರಸ್ಥಾನವಾಗಿದ್ದು ಇಲ್ಲಿ ಹಿಂದೂಗಳಷ್ಟೇ ಹೆಚ್ಚು ಪ್ರಮಾಣದ ಮುಸ್ಲಿಂ ಬಾಂಧವರು ವಾಸವಾಗಿದ್ದಾರೆ. ವ್ಯಾಪಾರ ಇತರೆ ವಾಣಿಜ್ಯ ವ್ಯವಹಾರಗಳಲ್ಲಿ ತೊಡಗಿ ಜೀವನ ನಡೆಸುತ್ತಿದ್ದು ಮೊದಲಿನಿಂದಲೂ ಇಲ್ಲಿ ಹಿಂದೂ, ಮುಸ್ಲಿಂ ಭಾಂಧವರು ಸೌಹಾರ್ದತೆಯ ಬದುಕು ಕಟ್ಟಿಕೊಂಡಿದ್ದಾರೆ. ಈ ಭಾಗದ ಹಳ್ಳಿಗಳಲ್ಲಿ ಮೊಹರಂ ವೇಳೆ ಹಿಂದೂ ಮುಸ್ಲಿಂ ಸೇರಿ ಶಾಂತಿ ಸೌಹಾರ್ದತೆಯೊಂದಿಗೆ ಸಡಗರ ಸಂಭ್ರಮದಿಂದ ಮೊಹರಂ ಹಬ್ಬ ಆಚರಿಸುತ್ತಿರುವುದು ಸಾಮಾನ್ಯವಾಗಿದ್ದು, ಇದೇ ಹಾದಿಯಾಗಿ ಮಂಗಳವಾರ ಹಿಂದೂ ಮಹಾ ಗಣಪತಿ ವಿಸರ್ಜನೆಯ ವೇಳೆ ವೈ.ಎನ್.ಹೊಸಕೋಟೆಯ ಹಳೇ ಸರ್ಕಾರಿ ಆಸ್ಪತ್ರೆಯ ಮಸೀದಿ ಬಳಿ ಮೆರವಣಿಗೆ ತೆರಳುತ್ತಿದ್ದಂತೆ ಅಪಾರ ಸಂಖ್ಯೆಯ ಮುಸ್ಲಿಂ ಯುವಕರು ಒಂದೆಡೆ ಸೇರಿ ಹಿಂದೂ ಮಹಾ ಗಣಪತಿ ವಿಸರ್ಜನೆಯಲ್ಲಿ ಭಾಗವಹಿಸಿದ್ದ ಆನೇಕ ಮಂದಿ ಹಿಂದೂಗಳಿಗೆ ಕೆಸರಿಬಾತ್ ಹಾಗೂ ಬಿಸಿಬಿಸಿ ಪಲಾವ್,ಕುಡಿವ ನೀರಿನ ಪಾಕೇಟ್‌ಗಳನ್ನು ವಿತರಿಸಿ ಗಣಪತಿ ಹಬ್ಬದ ಶುಭಾಶಯ ಕೋರಿದ್ದಾರೆ.
ಗಣಪತಿ ಹಬ್ಬದ ಹಿನ್ನಲೆಯಲ್ಲಿ ತಾಲೂಕಿನ ವೈ.ಎನ್.ಹೊಸಕೋಟೆ ಹಿಂದೂ ಮಹಾ ಗಣಪತಿ ಯುವಕ ಸಂಘದವರಿಂದ ಪಟ್ಟಣದ ಬಸ್ ನಿಲ್ದಾಣದ ಬೃಹತ್ ಶೆಲ್ಟರ್ ವೊಂದರಲ್ಲಿ ದೊಡ್ಡ ಗಾತ್ರದ ಹಿಂದೂ ಮಹಾ ಗಣಪತಿಯನ್ನು ಪ್ರತಿಷ್ಟಾಪಿಸಲಾಗಿತ್ತು. ಕಳೆದ 10ದಿನಗಳಿಂದ ನಿತ್ಯ ಪೂಜಾ ಕೈಂಕರ್ಯಗಳನ್ನು ಗಣೇಶನಿಗೆ ನೆರೆವೇರಿಸಿದ್ದು ಮಂಗಳವಾರ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಮಧ್ಯಾಹ್ನ 3ಗಂಟೆ ಬಳಿಕ ವಿಸರ್ಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಪುರಬೀದಿಯ ಪ್ರಮುಖ ರಸ್ತೆಗಳ ಮೂಲಕ ಶಾಂತಿ ರೀತಿಯಲ್ಲಿ ಸಡಗರ ಸಂಭ್ರಮದಿಂದ ಮೆರವಣಿಗೆ ಕಾರ್ಯಕ್ರಮ ನಡೆಸಿದರು.
ರಾತ್ರಿ 7ಗಂಟೆಯ ಬಳಿಕ ಮೇಗಳಪಾಳ್ಯಕ್ಕೆ ಹೋಗುವ ರಸ್ತೆ ಪಕ್ಕದಲ್ಲಿರುವ ಕೆರೆಯೊಂದರಲ್ಲಿ ಗಣೇಶನ ವಿಸರ್ಜನಾ ಕಾರ್ಯಕ್ರಮ ಯಶಸ್ವಿಯಾಗಿ ನೆರೆವೇರಿಸಲಾಯಿತು.
ಇಲ್ಲಿನ ಹಿಂದೂ ಮಹಾ ಗಣಪತಿ ಸಂಘದ ಎಲ್ಲಾ ಯುವಕರು ಭಾಗವಹಿಸಿದ್ದು,ಇದೇ ವೇಳೆ ಯಾವುದೇ ಆಹಿತಕರ ಘಟನೆ ನಡೆಯದಂತೆ ಬಿಗಿಪೊಲೀಸ್ ಬಂದೋಬಸ್ತು ಕೈಗೊಂಡಿದ್ದು ತುಮಕೂರು ಜಿಲ್ಲಾ ಅಡಿಷನಲ್ ಎಸ್‌ಪಿ ಕಾದರ್,ಮಧುಗಿರಿ ಡಿವೈಎಸ್ ಪಿ ರಾಮಚಂದ್ರಪ್ಪ ಹಾಗೂ ನಗರ ಸಿಪಿಐ ಸುರೇಶ್, ಪಿಎಸ್ ಐ ಮಾಳಪ್ಪನಾಲ್ವಡಿ ಸೇರಿದಂತೆ 80ಕ್ಕೂ ಹೆಚ್ಚು ಮಂದಿ ಪೊಲೀಸರು ಬಂದೋಬಸ್ತಿನಲ್ಲಿ ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q