ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿ ಬ್ಯಾಡರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆಯೊಂದಕ್ಕೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದ್ದು, ಪರಿಣಾಮವಾಗಿ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಅಪಾರ ನಷ್ಟ ಸಂಭವಿಸಿದೆ.
ಬ್ಯಾಡರಹಳ್ಳಿ ಗ್ರಾಮದ ನಿವಾಸಿ ಭಾಗ್ಯಮ್ಮನವರು ಹಾಗೂ ಕುಟುಂಬಸ್ಥರು ಶನಿವಾರ ಮಸ್ಕಲ್ ಮಟ್ಟಿ ಗ್ರಾಮದಲ್ಲಿನ ಮಗಳ ಮನೆಗೆ ಮೊಮ್ಮಗಳ ನಾಮಕರಣ ದ ಶುಭಕಾರ್ಯಕ್ಕೆ ತೆರಳಿದಾಗ ಈ ದುರ್ಘಟನೆ ನಡೆದಿದ್ದು, ಮನೆಯಲ್ಲಿದ್ದ ಬೆಳೆ ಬಾಳುವ ವಸ್ತುಗಳು ಸುಟ್ಟು ಹೋಗಿದ್ದು, ಸುಮಾರು 8 ಲಕ್ಷ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು , ಗ್ರಾ. ಪಂ. ಅಧ್ಯಕ್ಷರು , ಉಪಾಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರದಿಂದ ಆದಷ್ಟು ಬೇಗ ಪರಿಹಾರ ಒದಗಿಸುವುದಾಗಿ ತಿಳಿಸಿದರು.
ಇನ್ನೂ ಸಂತ್ರಸ್ತ ಮಹಿಳೆ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ಅವರ ಕುಟುಂಬ ಈ ಘಟನೆಯಿಂದ ತೀವ್ರವಾಗಿ ನಷ್ಟಕ್ಕೊಳಗಾಗಿದ್ದು, ಸಂಕಷ್ಟದಲ್ಲಿದೆ. ಸರ್ಕಾರ ಈ ಕುಟುಂಬಕ್ಕೆ ತಕ್ಷಣವೇ ಪರಿಹಾರ ಒದಗಿಸುವ ಮೂಲಕ ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಸ್ಥಳೀಯ ಮುಖಂಡರು ಸರ್ಕಾರವನ್ನು ಇದೇ ವೇಳೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬ್ಯಾಡರಹಳ್ಳಿ ಗ್ರಾ.ಪಂ. ಅಧ್ಯಕ್ಷರಾದ ನೇತ್ರಾವತಿ ಅರುಣ್ ಕುಮಾರ್, ರವೀಶ್, ರಶ್ಮಿ ಮಂಜುನಾಥ್, ಹನುಮಂತರಾಯಪ್ಪ, ವರದರಾಜ್, ಕೃಷ್ಣಮೂರ್ತಿ, ಶಿವಮೂರ್ತಿ, ಹನುಮಂತರಾಯ, ಪಾಂಡುರಂಗಪ್ಪ , ಓಬಳೇಶ್ ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು ( ಚಿತ್ರದುರ್ಗ ) .
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy