ಮಧುಗಿರಿ: ಚೆಕ್ ಡ್ಯಾಂ ಕಮ್ ಬ್ರಿಡ್ಜ್ ನಿರ್ಮಾಣದಿಂದ ಈ ಭಾಗದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ, ಕಾಮಗಾರಿಯು ಜನರ ಮನಸ್ಸಿನಲ್ಲಿ ಸದಾಕಾಲ ನೆನಪಿನಲ್ಲಿ ಉಳಿಯುವಂಥದ್ದಾಗಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು.
ಕೊಡಿಗೇನಹಳ್ಳಿ ಹೋಬಳಿ, ಮುದ್ದೇನಹಳ್ಳಿ, ಶಾನ ಗಾನಹಳ್ಳಿ ನಡುವೆ ಜಯಮಂಗಲಿ ನದಿಗೆ ಅಡ್ಡಲಾಗಿ 18.50 ಕೋಟಿ ರೂ. ವೆಚ್ಚದ ಚೆಕ್ ಡ್ಯಾಂ ಕಮ್ ಬ್ರಿಡ್ಜ್, ಕುಮುದ್ವತಿ ನದಿಗೆ ಅಡ್ಡಲಾಗಿ ತಿಂಗಳುರು-ಕಲಿದೇವಪುರ ನಡುವೆ 8 ಕೋಟಿ ರೂ. ವೆಚ್ಚದ ಚೆಕ್ ಡ್ಯಾಂ ಕಮ್ ಬ್ರಿಡ್ಜ್ ಹಾಗೂ ದೊಡ್ಡೇರಿ ಹೋಬಳಿಯ ಜಕ್ಕೇನಹಳ್ಳಿ ಮತ್ತು ಶಂಕರಪುರ ನಡುವೆ 3 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ಕಮ್ ಬ್ರಿಡ್ಜ್ ನಿರ್ಮಾಣ ಸೇರಿ ಒಟ್ಟು 29.50 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಮುದ್ದೇನಹಳ್ಳಿಯಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿದು ಎರಡೂವರೆ ವರ್ಷಗಳು ಕಳೆದಿದ್ದು ಹಳ್ಳಿಗಾಡಿನ ಜನರಿಗೆ ಅಗತ್ಯವಿರುವ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ತಾಲೂಕಿನಲ್ಲಿ ಹರಿಯುವ ಮೂರು ನದಿಗಳ ನೀರು ನೆರೆಯ ಸೀಮಾಂಧ್ರಕ್ಕೆ ಹರಿಯುವುದರಿಂದ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದಾಗಿ ಚೆಕ್ ಡ್ಯಾಂ ಮತ್ತು ಬ್ರಿಡ್ಜ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಗಳ ನಿರ್ಮಾಣದಿಂದಾಗಿ ಮಳೆಯ ನೀರು ಭೂಮಿಯಲ್ಲಿ ಇಂಗಿಸಿದರೆ ಫ್ಲೋರೈಡ್ ಕಡಿಮೆ ಯಾಗುತ್ತದೆ ಎಂದರು.
ಸರ್ಕಾರದ ಪಂಚ ಗ್ಯಾರಂಟಿಗಳು ಅರ್ಹರಿಗೆ ತಲುಪಬೇಕು. ರೈತರು ಶ್ರಮ ಜೀವಿಗಳಾಗಿದ್ದು ಅವರಿಗೆ ನಮ್ಮ ಸರ್ಕಾರ ಸೌಲಭ್ಯ ದೊರಕಿಸುತ್ತಿದೆ. ಅವರು ಪ್ರಕೃತಿಯ ಅವಕೃಪೆಯಿಂದಾಗಿ ಬಹಳಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ವಿದ್ಯೆಯಿಂದ ವಂಚಿತರಾಗಿಸುವುದು ಬೇಡ. ಕೇಂದ್ರ ಸಚಿವ ವಿ.ಸೋಮಣ್ಣ, ರಾಜ್ಯ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ ರವರ ಸಹಕಾರದಿಂದ ಈ ಕಾಮಗಾರಿಗಳು ಆರಂಭವಾಗಿದ್ದು ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳಲಿವೆ ಎಂದು ರಾಜಣ್ಣ ಹೇಳಿದರು.
ಸಚಿವ ಎನ್.ಎಸ್. ಬೋಸರಾಜು ಮಾತನಾಡಿ, ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ 3 ಸಾವಿರ ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಳುಹಿಸಿದ್ದು, ಇದರಲ್ಲಿ ಜಿಲ್ಲೆಯ ಕೊರಟಗೆರೆ, ಮಧುಗಿರಿ, ಚಿಕ್ಕನಾಯಕನಹಳ್ಳಿ ತಾಲೂಕುಗಳು ಸೇರಿವೆ. ಕೊಡಿಗೇನಹಳ್ಳಿ ಹೋಬಳಿಯ ಹದ್ದು ಗ್ರಾಮಕ್ಕೆ ಅಗತ್ಯವಿರುವ ಚೆಕ್ ಡ್ಯಾಂ ಮತ್ತು ಬ್ರಿಡ್ಜ್ ಕಾಮಗಾರಿಗೆ 8 ರಿಂದ 10 ಕೋಟಿ ರೂ.ಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಕಳೆದ ಎರಡೂವರೆ ವರ್ಷದಲ್ಲಿ ಜಿಲ್ಲೆಯಲ್ಲಿನ ಎಸ್ಸಿ ಮತ್ತು ಎಸ್ಟಿ ಜನಾಂಗದ ಸುಮಾರು 12264 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ ಅಂತಾ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


