ಕೊರಟಗೆರೆ: ಹೊಳವನಹಳ್ಳಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆಗೆ ಗ್ರಾಮ ಪಂಚಾಯಿತಿ ಅಧಿಕಾರಿ ವರ್ಗ ಬೀಗ ಜಡಿದು ಮೌನಕ್ಕೆ ಶರಣಾಗಿದ್ದು, ಈ ಮೂಲಕ ಗೃಹ ಸಚಿವರ ರೈತಪರ ಆಶಯವನ್ನೇ ಹೊಳವನಹಳ್ಳಿ ಗ್ರಾಮ ಪಂಚಾಯಿತಿ ಮಣ್ಣು ಪಾಲು ಮಾಡಿದೆ ಎನ್ನುವ ಆಕ್ರೋಶ ಕೇಳಿ ಬಂದಿದೆ.
ಗ್ರಾಮೀಣ ಭಾಗದ ರೈತರ ಅನುಕೂಲಕ್ಕಾಗಿ 2018–19ರಲ್ಲಿ 2 ಕೋಟಿ ವೆಚ್ಚದಲ್ಲಿ 40 ಅಂಗಡಿ ಮಳಿಗೆ ನಿರ್ಮಾಣ ಮಾಡಲಾಗಿತ್ತು. ಆದರೆ ಈ 40 ಅಂಗಡಿ ಮಳಿಗೆಗಳ ಸುತ್ತಮುತ್ತ ಜಾಲಿ ಮತ್ತು ಬೇಲಿ ಗಿಡಗಳು ಬೆಳೆದು ಕೃತಕ ಕಾಡು ಸೃಷ್ಟಿಯಾಗಿದೆ. ಜನರಿಗೆ ಅನುಕೂಲವಾಗಲಿ ಎಂದು ಕೋಟಿಗಟ್ಟಲೆ ಹಣ ಸುರಿಸಿ ಕಟ್ಟಿದ ಕಟ್ಟಡ ನೀರಲ್ಲಿ ಮಾಡಿದ ಹೋಮದಂತಾಗಿದೆ.
ಶುಕ್ರವಾರದ ಹೊಳವನಹಳ್ಳಿ ತರಕಾರಿ ಸಂತೆಗೆ ತಾ.ಪಂ. ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದಲೇ ತೊಂದರೆಯಾಗುತ್ತಿದೆ. ಕೊರೊನಾ ಸಮಯದಲ್ಲಿ ಸ್ಥಗಿತವಾದ ಶುಕ್ರವಾರ ತರಕಾರಿ ಸಂತೆ ಪ್ರಾರಂಭಕ್ಕೆ ಗ್ರಾಮ ಪಂಚಾಯಿತಿಯೇ ಮನಸ್ಸು ಮಾಡದೇ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಹೊಳವನಹಳ್ಳಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ಅಧಿಕಾರ ದುರುಪಯೋಗದ ಕರ್ಮಕಾಂಡ ಬಗೆದಷ್ಟು ಬಯಲಾಗ್ತಿದೆ. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿಯ ಕೇಂದ್ರ ಸ್ಥಾನದ ಗ್ರಾಮ ಪಂಚಾಯಿತಿಯ ಸಮಸ್ಯೆ ಕೇಳೋರು ಯಾರು..? ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಕೊರೋನಾ ರೋಗ ಹರಡುವ ಉದ್ದೇಶದಿಂದ 2020ರಲ್ಲಿ ಸ್ಥಗಿತವಾದ ಶುಕ್ರವಾರ ತರಕಾರಿ ಸಂತೆಯ 40 ಅಂಗಡಿ ಮಳಿಗೆಗಳ ಹರಾಜು ನಡೆಸದೇ 4 ವರ್ಷದಿಂದ ಹೊಳವನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೀನಾಮೇಷ ಎಣಿಸುತ್ತಿದೆ. ಅಂಗಡಿ ಮಳಿಗೆ ಮತ್ತು ಹರಾಜು ಪ್ರಕ್ರಿಯೆಯ ದಾಖಲೆ ಕೇಳಿದ್ರೇ ಅಧಿಕಾರಿಗಳು ತಲೆತಗ್ಗಿಸಿ ಮೌನಕ್ಕೆ ಶರಣಾಗುತ್ತಿದ್ದಾರೆ.
ತರಕಾರಿ ಸಂತೆಯಿಂದ ಗ್ರಾಪಂಗೆ ಪ್ರತಿ ತಿಂಗಳು ಬರುತ್ತಿದ್ದ 60 ಸಾವಿರ ತೆರಿಗೆ ಹಣಕ್ಕೂ ವಿಘ್ನ ಬಂದಿದೆ. ಕೃಷಿ ಉತ್ಪನ್ನ ಉಪ ಮಾರುಕಟ್ಟೆಗೆ ತಾಪಂ ಇಓ ಭೇಟಿ ನೀಡಿ ಕ್ರಮಕ್ಕೆ ಸೂಚಿಸಿದ್ರು ಗ್ರಾ.ಪಂ. ನಿರ್ಲಕ್ಷ್ಯವಹಿಸಿದೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296