ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದು ಯಾವುದೇ ರಾಜಕೀಯ ಉದ್ದೇಶದಿಂದಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರೊಂದಿಗಿನ ಭೇಟಿಯ ಕುರಿತು ಉಂಟಾಗಿರುವ ರಾಜಕೀಯ ಚರ್ಚೆಗಳಿಗೆ ತೆರೆ ಎಳೆದರು. “ನಾನು ಅವರನ್ನು ರಾಜಕೀಯ ಕಾರಣಕ್ಕಾಗಿ ಭೇಟಿಯಾಗಿಲ್ಲ. ಕೈಗಾರಿಕೆಗೆ ಸಂಬಂಧಿಸಿದ ಒಂದು ಪ್ರಮುಖ ವಿಚಾರವಿತ್ತು, ಅದಕ್ಕಾಗಿ ಅವರನ್ನು ಭೇಟಿ ಮಾಡಿದ್ದೆ. ಈ ಹಿಂದೆ ನಾವು ಒಟ್ಟಾಗಿ ಸರ್ಕಾರ ನಡೆಸಿದವರು, ಹಾಗಾಗಿ ಭೇಟಿಯಾಗುವುದರಲ್ಲಿ ತಪ್ಪೇನಿಲ್ಲ” ಎಂದು ಹೇಳಿದರು.
ಇದೇ ವೇಳೆ ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿರುವ ‘ದಲಿತ ಸಿಎಂ’ ಕೂಗಿನ ಬಗ್ಗೆಯೂ ಪರಮೇಶ್ವರ್ ಮಾತನಾಡಿದರು. “ದಲಿತ ಸಿಎಂ ಬಗ್ಗೆ ಚರ್ಚೆಯಾಗಲಿ, ಅದರಲ್ಲಿ ತಪ್ಪೇನಿಲ್ಲ. ಆದರೆ ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ” ಎಂದರು.
ಹೊಸ ಶಾಸಕರು ಸಚಿವ ಸ್ಥಾನಕ್ಕಾಗಿ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, “ಹೊಸಬರು ಸಂಪುಟ ಸೇರಬಾರದು ಎಂದೇನೂ ಇಲ್ಲ. ಅವರಿಗೆ ಅನುಭವ ಬರಲಿ ಎಂಬ ಕಾರಣಕ್ಕೆ ಹಿರಿಯರು ಸಲಹೆ ನೀಡುತ್ತಿರಬಹುದು. ಮಂತ್ರಿಗಳಾಗಲು ಎಲ್ಲರೂ ಅರ್ಹರಿದ್ದಾರೆ, ಆದರೆ ಕೇವಲ 34 ಸ್ಥಾನಗಳು ಮಾತ್ರ ಇರುತ್ತವೆ. ಸಂಪುಟ ಪುನಾರಚನೆ ಅಥವಾ ನಾಯಕತ್ವ ಬದಲಾವಣೆ ಆಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಏನೋ ಒಂದು ಬದಲಾವಣೆ ಖಂಡಿತ ಆಗಲಿದೆ” ಎಂದು ಮಾರ್ಮಿಕವಾಗಿ ನುಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


