ತುಮಕೂರು: ಲಾರಿ ಮತ್ತು ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ನಗರದ ಶಿರಾ ಗೇಟ್ ಬಳಿಯ ಎಸ್ ಮಾಲ್ ಬಳಿಯಲ್ಲಿ ನಡೆದಿದೆ.
ತುಮಕೂರಿನ ಶಾಂತಿನಗರ ನಿವಾಸಿ ರಾಜಣ್ಣ(64) ಮೃತಪಟ್ಟ ದ್ವಿಚಕ್ರ ವಾಹನ ಸವಾರ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸೋಮವಾರ ಬೆಳಗ್ಗೆ ಮಾರುಕಟ್ಟೆಗೆ ತೆರಳಿ ಮನೆಗೆ ವಾಪಸ್ ಆಗುತ್ತಿದ್ದ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದ ವೇಳೆ ರಸ್ತೆಗೆ ತಲೆ ಬಡಿದ ಪರಿಣಾಮ ತಲೆ ಛಿದ್ರಛಿದ್ರಗೊಂಡಿದೆ. ಘಟನಾ ಸ್ಥಳಕ್ಕೆ ತುಮಕೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


