ಹಾಸನ: ಜಿಲ್ಲೆಯ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬುಲೆಟ್ ಬೈಕ್ ಚಲಾಯಿಸುತ್ತಿದ್ದ 23 ವರ್ಷದ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ.
ಮೃತ ಯುವತಿಯನ್ನು ಸತ್ಯಮಂಗಲ ಬಡಾವಣೆಯ ನಿವಾಸಿ ಪ್ರಿಯಾ (23) ಎಂದು ಗುರುತಿಸಲಾಗಿದೆ. ಇವರ ಜೊತೆಗಿದ್ದ ಸ್ನೇಹಿತೆ ಸ್ವಾತಿ (24) ಎಂಬುವವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೆ ಕಾರಣ:
ಮೂಲಗಳ ಪ್ರಕಾರ, ಯುವತಿಯರು ಹೆಲ್ಮೆಟ್ ಧರಿಸದೆ ಬುಲೆಟ್ ನಲ್ಲಿ ‘ಜಾಲಿ ರೈಡ್’ ಹೊರಟ್ಟಿದ್ದರು. ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿದ್ದ ಹಂಪ್ (ವೇಗ ನಿಯಂತ್ರಕ) ಗಮನಿಸದ ಕಾರಣ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಪ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಹಾಸನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಯ ಸಾವಿನಿಂದ ಅವರ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


