ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಇಂದು ಒಂದು ಅಪರೂಪದ ಹಾಗೂ ನಾಟಕೀಯ ಬೆಳವಣಿಗೆ ಕಂಡುಬಂದಿದೆ. ಶಾಸಕರು ಕೇಳಿದ ಪ್ರಶ್ನೆಗಳಿಗೆ ಸರ್ಕಾರವು ಸಮರ್ಪಕವಾಗಿ ಉತ್ತರ ನೀಡುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, ಸದನವನ್ನು ಮುಂದೂಡಿ ಸಭಾತ್ಯಾಗ ಮಾಡಿದರು.
ಸೋಮವಾರ ವಿಧಾನಸಭೆ ಕಲಾಪ ಆರಂಭವಾದಾಗ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಶಾಸಕರು ಕೇಳಿದ್ದ 230 ‘ಅನ್ಸ್ಟಾರ್ಡ್’ (ಚುಕ್ಕೆ ಗುರುತಿಲ್ಲದ) ಪ್ರಶ್ನೆಗಳ ಪೈಕಿ ಕೇವಲ 84ಕ್ಕೆ ಮಾತ್ರ ಉತ್ತರಗಳನ್ನು ಮಂಡಿಸಿದರು. ಕಳೆದ ವಾರವೂ ಸರ್ಕಾರ ಕೇವಲ 50 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿತ್ತು. ಸಚಿವರ ಈ ಕಾರ್ಯವೈಖರಿಯಿಂದ ಸ್ಪೀಕರ್ ತೀವ್ರ ಆಕ್ರೋಶಗೊಂಡರು.
ಸಚಿವರ ನಡೆಯನ್ನು ಖಂಡಿಸಿದ ಯು.ಟಿ. ಖಾದರ್, “ಈ ಸದನ ಇರುವುದು ಸಚಿವರಿಗಾಗಿ ಅಲ್ಲ, ಶಾಸಕರಿಗಾಗಿ. ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಚರ್ಚಿಸಲು ಶಾಸಕರು ಮೂರು ತಿಂಗಳಿಗೊಮ್ಮೆ ಇಲ್ಲಿಗೆ ಬರುತ್ತಾರೆ. ನಾನು ನಾಲ್ಕು ಬಾರಿ ಸ್ಪಷ್ಟ ಆದೇಶ ನೀಡಿದ್ದರೂ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಶಾಸಕರ ಪ್ರಶ್ನೆಗಳಿಗೆ ಉತ್ತರವೇ ಸಿಗದಿದ್ದರೆ ಅವರು ಇಲ್ಲಿಗೆ ಬರಬೇಕಾದ ಅಗತ್ಯವೇನು?” ಎಂದು ಪ್ರಶ್ನಿಸಿದರು.
“ಸಂಬಂಧಪಟ್ಟ ಸಚಿವರು ಮತ್ತು ಇಲಾಖಾ ಕಾರ್ಯದರ್ಶಿಗಳು ಈ ಬಗ್ಗೆ ಸ್ಪಷ್ಟನೆ ನೀಡುವವರೆಗೆ ನಾನು ಸದನವನ್ನು ನಡೆಸುವುದಿಲ್ಲ” ಎಂದು ಖಡಕ್ ಆಗಿ ಹೇಳಿದ ಸ್ಪೀಕರ್, ಸದನವನ್ನು ಮುಂದೂಡಿ ತಮ್ಮ ಚೇಂಬರ್ಗೆ ತೆರಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, “ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರೂ ಮಂತ್ರಿಗಳು ಸುಧಾರಿಸಿಲ್ಲ. ಅವರು ಸದನಕ್ಕೆ ಬರುವುದು ಮತ್ತು ಹೋಗುವುದು ಕೇವಲ ಔಪಚಾರಿಕತೆಯಾಗಿದೆ” ಎಂದು ಟೀಕಿಸಿದರು.
ಮನವೊಲಿಸಿದ ಸಿಎಂ:
ಸ್ಪೀಕರ್ ಅವರು ಕಲಾಪದಿಂದ ಹೊರನಡೆದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪೀಕರ್ ಕಚೇರಿಗೆ ಭೇಟಿ ನೀಡಿದರು. ಯು.ಟಿ. ಖಾದರ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವ ಭರವಸೆ ನೀಡಿದರು. ಮುಖ್ಯಮಂತ್ರಿಗಳ ಮನವೊಲಿಕೆಯ ನಂತರ ಸ್ಪೀಕರ್ ಖಾದರ್ ಅವರು ಮತ್ತೆ ಕಲಾಪ ನಡೆಸಲು ಸಮ್ಮತಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


