ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ(ದ.ರಾ.ಬೇಂದ್ರೆ) ಅವರು 1896ನೇ ಇಸವಿಯ ಜನವರಿ 31ರಂದು ಜನಿಸಿದರು. ಅವರ ಜನ್ಮ ದಿನಾಚರಣೆಯಾದ ಈ ದಿನ ಅವರ ಕುರಿತು ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳೋಣ…
ದ.ರಾ.ಬೇಂದ್ರೆ ಅವರು ರಾಮಚಂದ್ರ ಭಟ್ಟ, ಅಂಬಿಕೆ ದಂಪತಿಯ ಪುತ್ರರಾಗಿದ್ದಾರೆ. 1973ರಲ್ಲಿ ಬೇಂದ್ರೆಯವರ ಕವನ ಸಂಕಲನವಾದ ‘ನಾಕುತಂತಿ’ಗಾಗಿ ಅವರು ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡರು. ಇದಲ್ಲದೇ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.
ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದ ಅವರ ಮೊದಲ ಸಾಹಿತ್ಯ ರಚನೆ ‘ಒಲವು’. 1918ರಲ್ಲಿ ಅವರ ಮೊದಲ ಕವನ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. “ಗರಿ”, “ಕಾಮಕಸ್ತೂರಿ “, “ಸೂರ್ಯಪಾನ”, “ನಾದಲೀಲೆ”, “ನಾಕುತಂತಿ” ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು.
ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. 1921ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ “ಗೆಳೆಯರ ಗುಂಪು” ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು.
ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು.
ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು.
ಇವರು ಬರೆದ “ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ” ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ. ಇವರನ್ನು ಕನ್ನಡದ “ಕನ್ನಡದ ಠಾಗೋರ್” ಎಂದೂ ಕರೆಯಲಾಗುತ್ತದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1