ಸಾಮಾನ್ಯವಾಗಿ ನಾವು ಮಾಹಿತಿ (Data) ಸ್ಟೋರೇಜ್ ಮಾಡಲು ಮತ್ತು ಮಾಹಿತಿ ತಿದ್ದುಪಡಿ, ಡಿಲೀಟ್, ವಿವಿಧ ಅಪ್ಲಿಕೇಷನ್ ಬಳಸಿ ವಿವಿಧ ಕಾರ್ಯ ನಿರ್ವಹಿಸಲು ಹಾರ್ಡ್ ಡಿಸ್ಕ್ ಬಳಸುತ್ತೇವೆ ಎಂದು ತಿಳಿದುಕೊಂಡಿದ್ದೇವೆ ಅಷ್ಟೇ ಆದರೆ ಅದು ಹೇಗೆ ನಿರ್ಮಾಣ ಆಗಿರುತ್ತದೆ ಮತ್ತು ಹೇಗೆ ಕೆಲಸ ಮಾಡುತ್ತದೆ ಎಂದು ಬಹುಶಃ (ಸಾಮಾನ್ಯ ಜನ) ಯೋಚಿಸಿರುವುದಿಲ್ಲ, ಹಾಗೆ ಯೋಚಿಸಿದ್ದರೂ ಕೆಲವು ಮಂದಿ ಇರಬಹುದು. ನಾನು ಇಲ್ಲಿ ಅದರ ನಿರ್ಮಾಣ ಮತ್ತು ಕಾರ್ಯನಿರ್ವಹಿಸುವ ವಿಧಾನವನ್ನು ಅತ್ಯಂತ ಸರಳವಾಗಿ ವಿವರಿಸಲು ಪ್ರಯತ್ನಿಸಿದ್ದೇನೆ.
ಹಾರ್ಡ್ ಡಿಸ್ಕ್ ಬಹುಶಃ ಇದರ ಬಳಕೆ ಇರದ ಕ್ಷೇತ್ರವೇ ಇಲ್ಲ ಎನ್ನಬಹುದು. ಮನೆಯಲ್ಲಿ ಅಧ್ಯಯನದ ದೃಷ್ಟಿಯಿಂದ ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ನಿಂದ ಹಿಡಿದು, ವಾಣಿಜ್ಯ, ವಿಜ್ಞಾನ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಇದರ ಬಳಕೆ ಇದೆ. ನಾವು ಸಾವಿರಾರು ವರ್ಷಗಳ ಹಿಂದೆ ನಮ್ಮ ಋಷಿ ಮುನಿಗಳು ರಾಮಾಯಣ, ಮಹಾಭಾರತ ಮತ್ತು ವೇದೋಪನಿಷತ್ತುಗಳನ್ನು ದೇವ ಭಾಷೆ ಅಥವಾ ಸಂಸ್ಕೃತ ಭಾಷೆಯ ಸಾವಿರ ಸಾವಿರ ಪುಟಗಳಷ್ಟು ಬರೆದಿಡುವ ಯಾವುದೇ ಬೃಹತ್ ಸಾಧನ ಅಥವಾ ವ್ಯವಸ್ಥೆ ಇರದ ಕಾಲದಲ್ಲಿ ಕೇವಲ ನಿರಂತರ ಪಠನೆ, ಬಾಯಿಪಾಠ ಮೂಲಕ ಕೇವಲ ತಮ್ಮ ತಮ್ಮ ಮನಸ್ಸಿನಲ್ಲಿ ಅಷ್ಟೊಂದು ಸಾವಿರಾರು ಸಾಲುಗಳನ್ನು ನೆನಪಿಟ್ಟುಕೊಳ್ಳುತ್ತಿದ್ದರು ಮತ್ತು ತಮ್ಮ ಮುಂದಿನ ತಲೆಮಾರುಗಳಿಗೆ ಕಲಿಸುತ್ತಿದ್ದರು ಎಂದರೆ ನಂಬಲು ಕಷ್ಟ ಆದರೂ ಇದು ನಂಬಲೇ ಬೇಕಾದ ಸತ್ಯ. ಅಂದರೆ ಅಂದಿನ ಮೆದುಳಿಗೆ ಅದೆಷ್ಟೊಂದು ನೆನಪಿನ ಶಕ್ತಿ ಇದ್ದಿರಬೇಕು ಅಲ್ಲವೇ? ನಂತರ ಮುಂದೆ ಕಾಲ ಕಳೆದಂತೆ ಶ್ಲೋಕಗಳ ಶಬ್ದಗಳಿಗೆ ಲಿಪಿಗಳ ರೂಪ ನೀಡಿದಾಗ ಅವುಗಳನ್ನು ಗುರುಕುಲ ಸಮಯದಲ್ಲಿ ಮರಳ ಮೇಲೆ ತಮ್ಮ ಬೆರಳ ಮೂಲಕ ಬರೆದು ಕಲಿಯುತ್ತಿದ್ದರು ಅಥವಾ ಕಲಿಸುತ್ತಿದ್ದರು, ಹಾಗೆಯೇ ವಿವಿಧ ಕಾಲ ಘಟ್ಟಗಳಲ್ಲಿ ಮುಂದುವರೆದು ಬಹಳ ಕಾಲದ ನಂತರ ತಾಳೆಗರಿಗಳ ಬಳಕೆ ಪ್ರಾರಂಭವಾಯಿತು. ಹೀಗೆ ಅಧ್ಯಯನ ನಡೆಸುತ್ತಾ ಹೋದರೆ ಮಾಹಿತಿ ಶೇಖರಿಸಿಡುವ ಯುಗ ಬಹಳ ಹಿಂದೆಯೆ ಪ್ರಾರಂಭವಾಗಿ ನಂತರ, ಅದು ಆಧುನಿಕ ಯುಗದ ಪೇಪರ್ ನ ಆವಿಷ್ಕಾರದವರೆಗೆ ಹತ್ತು ಹಲವು ಮಜಲು ಪ್ರಗತಿ ಕಾಣುತ್ತಾ ಬಂದು, ಇಂದು ಗ್ರಾಮಾಫೋನ್ ಪ್ಲೇಟ್ ಆವಿಷ್ಕಾರ, ಟೇಪ್ ರೆಕಾರ್ಡರ್, ಹಾರ್ಡ್ ಡಿಸ್ಕ್, ಕಾಂಪಾಕ್ಟ್ ಡಿಸ್ಕ್(CD), DVD (Digital Versatile Disc) ವರೆಗೆ ಸಾಗಿ ನಂತಹ ಕೇವಲ ನಮ್ಮ ಹೆಬ್ಬೆರಳಿಗಿಂತ ಕಡಿಮೆ ಅಳತೆಯ, ಒಂದು ಮಿಲಿ ಸೆಂಟಿಮೀಟರ್ ಗಾತ್ರದ ಮೈಕ್ರೋ ಚಿಪ್ ವರೆಗೆ ಬಂದು ನಿಂತಿದೆ. ನಾನೊಂದು ಕಡೆ ಓದಿದ್ದೆ ಮನುಷ್ಯ ಮನಸ್ಸು ಮಾಡಿದರೆ ಈ ಪ್ರಪಂಚದ ಎಲ್ಲಾ ಡೇಟಾಗಳನ್ನು ಕೇವಲ ಒಂದೇ ಒಂದು ಮೈಕ್ರೋ ಚಿಪ್ ನಲ್ಲಿ ಶೇಖರಿಸಿ ಇಡಬಹುದು ಎಂದು.
ಈ ಮೇಲಿನ ಮಾಹಿತಿಯಲ್ಲಿ ಏನಾದರೂ ತಿದ್ದುಪಡಿ ಇದ್ದರೆ ಅಥವಾ ಮತ್ತಷ್ಟು ಮಾಹಿತಿ ಇದ್ದರೆ ಯಾರಾದರು ತಿಳಿಸಬಹುದು ಹೇಳುತ್ತಾ ಈಗ ಹಾರ್ಡ್ ಡಿಸ್ಕ್ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಸುವ ಒಂದು ಸಣ್ಣ ಯತ್ನ ಮಾಡುತ್ತೇನೆ. ಹಾರ್ಡ್ ಡಿಸ್ಕ್ ಗಳನ್ನು ಪ್ರಮುಖವಾಗಿ 2 ವಿಧಗಳಾಗಿ ವಿಂಗಡಿಸಬಹುದು ಮೊದಲನೆಯದು HDD ಅಂದರೆ, Hard Disk Drive (ಹಾರ್ಡ್ ಡಿಸ್ಕ್ ಡ್ರೈವ್) ಎರಡನೆಯದಾಗಿ SDD ಅಂದರೆ, Solid-Sate Drive (ಸಾಲಿಡ್ ಸ್ಟೇಟ್ ಡ್ರೈವ್). ಮೊದಲನೆಯದಾಗಿ HDD ಮೆಟಲ್ ನಿಂದ ಸೀಲ್ ಆಗಿರುವ ಒಂದು ಘಟಕ. ಈ Unit ಅಥವಾ ಘಟಕವನ್ನು ತೆರೆದು ನೋಡಿದಾಗ ಅದರಲ್ಲಿ Platter ಎಂಬ 360 ಡಿಗ್ರಿ ಇರುವ ವೃತ್ತಾಕಾರದ 1 ರಿಂದ 4 ಪ್ಲೇಟ್ ಗಳು ಒಂದರ ಮೇಲೆ ಒಂದರಂತೆ, ಒಂದಕ್ಕೊಂದು ಸಮಾನಾಂತರ ಇರುವ ಹಾಗೆ ಮತ್ತು ಒಂದಕ್ಕೊಂದು ತಾಗದ ಹಾಗೆ ROTATING SPINDLE ಗೆ ಅಳವಡಿಸುತ್ತಾರೆ.
ಇವುಗಳ 2 ಬದಿಯೂ ಕೂಡ ಮಾಹಿತಿ ಸ್ಟೋರೇಜ್ ಮಾಡಬಹುದಾದ ಸರ್ಫಸ್ ಆಗಿರುತ್ತವೆ. ಅಂದರೆ 2 ಪ್ಲೇಟ್ ಗಳಿದ್ದರೆ 4 ಸರ್ಫೆಸ್, 3 ಇದ್ದರೆ 6 ಸರ್ಫೆಸ್ ಹೀಗೆ. ಈ Platters ಅನ್ನು ಕಾಂತೀಯವಲ್ಲದ, ಹಗುರವಾದ ಅಲ್ಯೂಮಿನಿಯಂ–ಮೆಗ್ನೀಷಿಯಮ್ ಮಿಶ್ರಲೋಹಗಳಿಂದ ನಿರ್ಮಿಸಲಾಗುತ್ತದೆ. ಈ ಸರ್ಫೇಸ್ ಗಳನ್ನು ಹೆಚ್ಚು ಉತ್ಕೃಷ್ಟವಾಗಿಸಲು ಮೊದಲು ಗಾಜು ಅಥವಾ ಸೆರಾಮಿಕ್ ನಿಂದ ಲೇಪನ ಮಾಡಿರುತ್ತಾರೆ ಇದರ ಜೊತೆಗೆ Magnetic Field (ಕಾಂತೀಯ ಪದರವಾಗಿ) ಮಾಡಲು ಕೋಬಾಲ್ಟ್ ಗೆ ಮಿಶ್ರ ಲೋಹವಾಗಿ ಪ್ಲಾಟಿನಂ, ಪಲ್ಲಾಡಿಯಮ್ ಲೇಪನ ಮಾಡುತ್ತಾರೆ. ಇದರ ಮೇಲೆ ಕ್ರೋಮಿಯಮ್, ರುಥೇನಿಯಮ್ ಮತ್ತು ನಿಕ್ಕಲ್ ಪದರಗಳನ್ನು ಲೇಪಿಸಿರುತ್ತಾರೆ. ಈ ಪದರಗಳ ರಕ್ಷಣೆ ಮಾಡಲು ಕೊನೆಯದಾಗಿ ಕಾರ್ಬನ್ ಆಧಾರಿತ ಪದರವನ್ನು ಸೇರಿಸಲಾಗುತ್ತದೆ. ಇಷ್ಟು ಆದ ನಂತರ ಅಡಿಯಲ್ಲಿ Spindle ಗೆ ಅಳವಡಿಸಲಾಗಿರುವ Spindle Motar ವಿದ್ಯುತ್ ಸಹಾಯದಿಂದ ತಿರುಗಲು ಪ್ರಾರಂಭಿಸಿದಾಗ, Spindle ಕೂಡ ತಿರುಗಲು ಪ್ರಾರಂಭಿಸುತ್ತದೆ ಇದರಿಂದ Spindle ಗೆ ಅಳವಡಿಸಿರುವ Platters ತಿರುಗಲು ಪ್ರಾರಂಭಿಸುತ್ತವೆ. ಇದರ ತಿರುಗುವಿಕೆಯ ವೇಗ ಎಷ್ಟು ಇರುತ್ತದೆ ಎಂದರೆ ನಿಮಿಷಕ್ಕೆ 7,200 ರಿಂದ ಹಿಡಿದು 12,000 ರಷ್ಟು ಇರುತ್ತದೆ.
ಈ Platters Unit ಪಕ್ಕದಲ್ಲಿ Read and Write Head (ಓದುವ / ಬರೆಯುವ ಹೆಡ್) ಗಳನ್ನು Movable Arm ಗೆ ಅಳವಡಿಸಿರುತ್ತಾರೆ, ಅದು ಹೆಡ್ ಗಳನ್ನು ಪ್ಲ್ಯಾಟರ್ ಗಳ ಸುತ್ತಲೂ ಚಲಿಸುವಂತೆ ಮಾಡುತ್ತದೆ. ಇವುಗಳು ಪ್ಲ್ಯಾಟರ್ ಗಳ Surface ನ Magnetic Field ನಲ್ಲಿ ಮುದ್ರಿತವಾಗಿರುವ ಡೇಟಾವನ್ನು ಓದುತ್ತವೆ ಮತ್ತು ಬರೆಯುತ್ತವೆ. ಪ್ರತಿಯೊಂದು ಪ್ಲ್ಯಾಟರ್‌ನಲ್ಲಿ ಸೆಗ್ಮೆಂಟ್ ಗಳು ಎಂದು ಕರೆಯಲ್ಪಡುವ ಟ್ರ್ಯಾಕ್ ಗಳು ಅಥವಾ ಕೇಂದ್ರೀಕೃತ ವೃತ್ತಗಳಿವೆ. ಪ್ರತಿಯೊಂದು ಟ್ರ್ಯಾಕ್ ಮತ್ತು ಸೆಕ್ಟರ್ ಸಂಖ್ಯೆಯು ಡೇಟಾವನ್ನು ಸಂಘಟಿಸಲು ಮತ್ತು ಪತ್ತೆಹಚ್ಚಲು ಬಳಸುವ ವಿಶಿಷ್ಟ ವಿಳಾಸವನ್ನು ರಚಿಸುತ್ತದೆ. ಸಾಮಾನ್ಯವಾಗಿ ಪ್ರತಿ ಪ್ಲ್ಯಾಟರ್ ಬದಿಗೆ ಒಂದು ಹೆಡ್ ಇರುತ್ತದೆ. ಅಂದರೆ ಒಂದು Platter ಗೆ ಮೇಲಿನ ಸರ್ಫೇಸ್ ಗೆ ಒಂದು ಮತ್ತು ಕೆಳಬದಿಯ ಸರ್ಫೇಸ್ ಗೆ ಒಂದು Head ಹೀಗೆ ಪ್ರತಿ Platter ಗೆ 2 ರಂತೆ ಹೆಡ್ ಇರುತ್ತದೆ. ಪ್ರತಿಯೊಂದು ಹೆಡ್ ಅನ್ನು ಒಂದೇ Actuator Shaft (ಆಕ್ಟಿವೇಟರ್ ಶಾಫ್ಟ್)ಗೆ ಜೋಡಿಸಲಾಗುತ್ತದೆ ಇದರಿಂದ ಎಲ್ಲಾ ಹೆಡ್‌ಗಳು ಏಕರೂಪವಾಗಿ ಚಲಿಸುತ್ತವೆ ಒಂದು ಹೆಡ್ ಟ್ರ್ಯಾಕ್ ಮೇಲೆ ಇರುವಾಗ, ಅಂದರೆ ಕೆಲಸ ಮಾಡುವಾಗ, ಇತರ ಎಲ್ಲಾ ಹೆಡ್‌ಗಳು ಆಯಾ ಮೇಲ್ಮೈಗಳ ಮೇಲೆ ಸ್ಥಿರವಾಗಿರುತ್ತವೆ.
ಸಾಮಾನ್ಯವಾಗಿ, ಹೆ ಡ್‌ಗಳಲ್ಲಿ ಒಂದು ಮಾತ್ರ ಒಂದು ಸಮಯದಲ್ಲಿ ಸಕ್ರಿಯವಾಗಿರುತ್ತದೆ, ಅಂದರೆ ಡೇಟಾವನ್ನು ಓದುವುದು ಅಥವಾ ಬರೆಯುವುದು ಮಾಡುತ್ತಿರುತ್ತದೆ. ಪ್ಲ್ಯಾಟರ್ ಮತ್ತು ಹೆಡ್ ನಡುವಿನ ಸ್ಥಳವು ತುಂಬಾ ಚಿಕ್ಕದಾಗಿದ್ದು, ಒಂದು ಧೂಳಿನ ಕಣ ಅಥವಾ ಬೆರಳಚ್ಚು ಕೂಡ ಸ್ಪಿನ್ ಅನ್ನು ನಿಷ್ಕ್ರಿಯಗೊಳಿಸಬಹುದು. ಹೀಗೆ ಎಲ್ಲವೂ ಹಾರ್ಡ್ ಡಿಸ್ಕ್ ಅಸೆಂಬ್ಲಿ (HDA) ಯಲ್ಲಿ ಜೋಡಿಸಲ್ಪಟ್ಟಿರುತ್ತವೆ. HDA ಹೊರಗೆ ಆಂತರಿಕ ಭಾಗಗಳ ಚಲನೆಯನ್ನು ನಿಯಂತ್ರಿಸುವ Logic Board (ಲಾಜಿಕ್ ಬೋರ್ಡ್) ಇರುತ್ತದೆ. ಇದು ಡ್ರೈವ್ ಒಳಗೆ ಮತ್ತು ಹೊರಗೆ ಡೇಟಾ ಚಲನೆಯನ್ನು ಸಹ ನಿಯಂತ್ರಿಸುತ್ತದೆ. ಇವಿಷ್ಟು Hard Disk Drive ನ ಒಂದು ಸಣ್ಣ ಮಾಹಿತಿಯಾದರೆ, ಇನ್ನು Solid-State Drive ನ ರಚನೆ ಮತ್ತು ಕಾರ್ಯ ವಿಧಾನ ಈ ಕೆಳಗಿನಂತೆ ಒಂದು ಸಣ್ಣ ಕಿರು ಪರಿಚಯ.
ಸಾಲಿಡ್–ಸ್ಟೇಟ್ ಡ್ರೈವ್ (SSD) ಒಂದು ಡೇಟಾ ಶೇಖರಣಾ ಸಾಧನವಾಗಿದ್ದು, ವಿದ್ಯುತ್ ಆಫ್ ಮಾಡಿದ ನಂತರವೂ ಡೇಟಾವನ್ನು ಸಂಗ್ರಹಿಸಲು ಇದು Flash Memory (ಫ್ಲ್ಯಾಶ್ ಮೆಮೊರಿ)ಯನ್ನು ಬಳಸುತ್ತದೆ. ಫ್ಲ್ಯಾಶ್ ವಿದ್ಯುತ್ ಇಲ್ಲದೆ ಡೇಟಾವನ್ನು ಸಂಗ್ರಹಿಸುತ್ತದೆ, ಇದು ಡೇಟಾವನ್ನು ಸಂಗ್ರಹಿಸಲು ಮತ್ತು ಹಿಂಪಡೆಯಲು ಹಲವಾರು ಸಂಯೋಜಿತ Sercute (ಸರ್ಕ್ಯೂಟ್)ಗಳನ್ನು ಒಳಗೊಂಡಿದೆ.SSD ಒಳಗೆ, ನಾವು Grid (ಗ್ರಿಡ್) ಮಾದರಿಗಳಲ್ಲಿ ಟ್ರಾನ್ಸಿಸ್ಟರ್‌ಗಳನ್ನು ಕಾಣಬಹುದು. ಈ ಗ್ರಿಡ್‌ಗಳೊಳಗಿನ ಪ್ರತಿಯೊಂದು ಸಾಲನ್ನು Page (ಪುಟ) ಎಂದು ಕರೆಯಲಾಗುತ್ತದೆ, ಅನೇಕ ಪುಟಗಳು ಒಂದು Block (ಬ್ಲಾಕ್) ಅನ್ನು ರೂಪಿಸುತ್ತವೆ.ಒಂದು SSD ಈ ಬ್ಲಾಕ್ ಗಳಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತದೆ. ಈ Transister (ಟ್ರಾನ್ಸಿಸ್ಟರ್)ಗಳಲ್ಲಿನ ವಿಭಿನ್ನ ಮಾಹಿತಿಗಳು Binary(ಬೈನರಿ) ಒನ್ ಗಳು ಮತ್ತು ಸೊನ್ನೆಗಳಾಗಿ ಅನುವಾದಿಸುತ್ತವೆ. ಈ ಬೈನರಿ ಎಂದರೆ SSD ಡೇಟಾವನ್ನು ಸಂವಹನ ಮಾಡುವುದು. SSD ನಿಯಂತ್ರಕವು ಡ್ರೈವ್ ನಲ್ಲಿ ನಿರ್ದಿಷ್ಟ ಡೇಟಾವನ್ನು ಎಲ್ಲಿ ಸಂಗ್ರಹಿಸಲಾಗಿದೆ ಎಂಬುದನ್ನು ಟ್ರ್ಯಾಕ್ ಮಾಡುತ್ತದೆ, ಮತ್ತು ಇದು ನಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿರುವ ಡೇಟಾವನ್ನು ಪ್ರವೇಶಿಸಲು ನಮಗೆ ಅನುಮತಿಸುತ್ತದೆ.
(SSD) ಭಿನ್ನವಾಗಿ ಹಾರ್ಡ್ ಡಿಸ್ಕ್ ಡ್ರೈವ್ ಗಳು ಆಗಿರುತ್ತವೆ. SSD ಗಳು HDD ಗಳಿಂದ ಹೊಂದಿರುವ ಅನೇಕ ವ್ಯತ್ಯಾಸಗಳು ಇವುಗಳ ತಂತ್ರಜ್ಞಾನಕ್ಕೆ ಮಾಡಿದ Update ಗಳಿಂದ ಬಂದಿವೆ. ಇವುಗಳಲ್ಲಿ ಓದುವ ಪ್ರಕ್ರಿಯೆಯು HDD ಗಳು ಮತ್ತು SSD ಗಳು ತಮ್ಮ ಸಾಧನಗಳಲ್ಲಿ ಡೇಟಾವನ್ನು ಹೇಗೆ ಹಿಂಪಡೆಯುತ್ತವೆ ಎಂಬುದನ್ನು ಸೂಚಿಸುತ್ತದೆ. SSD ಗಳು HDD ನಂತೆ ಯಾವುದೇ ಚಲಿಸುವ ಅಥವಾ ತಿರುಗುವ ಭಾಗಗಳನ್ನು ಹೊಂದಿಲ್ಲ ಮತ್ತು ಹೆಡ್ ಗಳನ್ನು ಹೊಂದಿಲ್ಲ. ನಾವು ಡೇಟಾವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, SSD ನಿಯಂತ್ರಕವು ಆ ಡೇಟಾ ಬ್ಲಾಕ್ ನ ವಿಳಾಸವನ್ನು ಕಂಡುಕೊಳ್ಳುತ್ತದೆ ಮತ್ತು ಅದರ ಚಾರ್ಜ್ ಅನ್ನು ಓದಲು ಪ್ರಾರಂಭಿಸುತ್ತದೆ. ಬ್ಲಾಕ್ ನಿಷ್ಕ್ರಿಯವಾಗಿದ್ದರೆ, ಕಸ ಸಂಗ್ರಹ ಎಂಬ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.
ಈ ಪ್ರಕ್ರಿಯೆಯು ನಿಷ್ಕ್ರಿಯ ಬ್ಲಾಕ್‌ಗಳನ್ನು ಅಳಿಸುತ್ತದೆ, ಹೊಸ ಡೇಟಾ ಸಂಗ್ರಹಣೆಗಾಗಿ ಅವುಗಳನ್ನು ಮುಕ್ತಗೊಳಿಸುತ್ತದೆ. ನಾವು SSD ಯಲ್ಲಿ ಡೇಟಾದ ಯಾವುದೇ ಭಾಗವನ್ನು ಬದಲಾಯಿಸಿದಾಗ ಅಥವಾ ಪುನಃ ಬರೆಯುವಾಗ, ಅದು ಸಂಪೂರ್ಣ ಫ್ಲ್ಯಾಶ್ ಬ್ಲಾಕ್ ಅನ್ನು ನವೀಕರಿಸಬೇಕು. ಮೊದಲಿಗೆ, SSD ಹಳೆಯ ಡೇಟಾವನ್ನು ಲಭ್ಯವಿರುವ ಬ್ಲಾಕ್ ಗೆ ನಕಲಿಸುತ್ತದೆ. ಮುಂದೆ, ಅದು ಮೂಲ ಬ್ಲಾಕ್ ಅನ್ನು ಅಳಿಸುತ್ತದೆ, ಹೊಸ ಬ್ಲಾಕ್‌ಗೆ ಬದಲಾವಣೆಗಳೊಂದಿಗೆ ಡೇಟಾವನ್ನು ಪುನಃ ಬರೆಯುತ್ತದೆ. SSD ಗಳು ಡೇಟಾವನ್ನು ಸರಿಸಲು ಮತ್ತು ತಾತ್ಕಾಲಿಕವಾಗಿ ನಕಲು ಮಾಡಲು ಹೆಚ್ಚುವರಿ ಆಂತರಿಕ ಸ್ಥಳವನ್ನು ಹೊಂದಿವೆ.

ಸಂಪಾದಕರ ನುಡಿ
ನಾವು ಪ್ರತಿದಿನ ಬಳಸುವ ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್‌ಗಳಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ಮಾಹಿತಿಯ ಹಿಂದೆ ಕಾರ್ಯನಿರ್ವಹಿಸುವ ವ್ಯವಸ್ಥೆಯ ಬಗ್ಗೆ ಸಾಮಾನ್ಯವಾಗಿ ನಾವು ಹೆಚ್ಚು ಗಮನ ಹರಿಸುವುದಿಲ್ಲ. ಆದರೆ ಆ ಮಾಹಿತಿ ಹೇಗೆ ಉಳಿಯುತ್ತದೆ, ಹೇಗೆ ಓದಿಕೊಳ್ಳುತ್ತದೆ ಮತ್ತು ಹೇಗೆ ಸುರಕ್ಷಿತವಾಗಿ ಸಂಗ್ರಹವಾಗಿರುತ್ತದೆ ಎಂಬುದು ತಿಳಿಯುವುದು ಇಂದಿನ ಕಾಲದಲ್ಲಿ ಅತ್ಯಂತ ಅಗತ್ಯ.
ಈ ಹಿನ್ನಲೆಯಲ್ಲಿ ಲೇಖಕರಾದ ವೇಣುಗೋಪಾಲ್ ಅವರು ರಚಿಸಿರುವ “ಹಾರ್ಡ್ ಡಿಸ್ಕ್ ಹೇಗೆ ಕೆಲಸ ಮಾಡುತ್ತದೆ?” ಎಂಬ ಈ ಲೇಖನವು ತಾಂತ್ರಿಕ ವಿಷಯವನ್ನು ಅತ್ಯಂತ ಸರಳ, ಸ್ಪಷ್ಟ ಹಾಗೂ ಹೋಲಿಕೆಗಳ ಮೂಲಕ ಓದುಗರಿಗೆ ಮುಟ್ಟಿಸುವ ಶ್ಲಾಘನೀಯ ಪ್ರಯತ್ನವಾಗಿದೆ. ಪ್ರಾಚೀನ ಕಾಲದ ಬಾಯಿಪಾಠ ಮತ್ತು ಲಿಪಿ ಪದ್ಧತಿಯಿಂದ ಆರಂಭಿಸಿ, ಇಂದಿನ HDD ಹಾಗೂ SSD ತಂತ್ರಜ್ಞಾನವರೆಗೆ ಮಾಹಿತಿ ಶೇಖರಣೆಯ ಬೆಳವಣಿಗೆಯನ್ನು ಒಂದೇ ಲೇಖನದಲ್ಲಿ ಹಿಡಿದಿಡುವ ಪ್ರಯತ್ನ ಗಮನಾರ್ಹವಾಗಿದೆ.
ವಿದ್ಯಾರ್ಥಿಗಳು, ತಂತ್ರಜ್ಞಾನದಲ್ಲಿ ಆಸಕ್ತಿ ಇರುವವರು ಮಾತ್ರವಲ್ಲದೆ, ಸಾಮಾನ್ಯ ಓದುಗರಿಗೂ ಅರ್ಥವಾಗುವಂತೆ ಈ ಲೇಖನ ರೂಪುಗೊಂಡಿದ್ದು, ಡಿಜಿಟಲ್ ಜಗತ್ತಿನ ಮೂಲಭೂತ ಜ್ಞಾನವನ್ನು ಪಡೆಯಲು ಇದು ಸಹಾಯಕವಾಗಲಿದೆ ಎಂಬ ವಿಶ್ವಾಸ ನಮಗಿದೆ.
ಓದುಗರು ಈ ಲೇಖನವನ್ನು ಓದಿ ತಮ್ಮ ಅಭಿಪ್ರಾಯ, ಸಲಹೆ ಹಾಗೂ ಪ್ರಶ್ನೆಗಳನ್ನು ಹಂಚಿಕೊಳ್ಳುವ ಮೂಲಕ ಇಂತಹ ಜ್ಞಾನಮೂಲಕ ಬರಹಗಳಿಗೆ ಪ್ರೋತ್ಸಾಹ ನೀಡಬೇಕೆಂದು ನಾವು ಆಶಿಸುತ್ತೇವೆ.
— ಸಂಪಾದಕರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


