ವಿಶೇಷ ವರದಿ: ಮಂಜುಸ್ವಾಮಿ ಎಂ.ಎನ್.
ತುಮಕೂರು/ಚಿಕ್ಕನಾಯಕನಹಳ್ಳಿ : ತಾಲೂಕಿನ ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಎಸ್.ನಾಗರಾಜುಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಹತ್ತು ಸಾವಿರ ದಂಡ ವಿಧಿಸಿದ ಏಳನೇ ಅಪಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶಿಸಿದೆ.
ಏಳನೇ ಅಪಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಟಿ.ಪಿ.ರಾಮಲಿಂಗೇಗೌಡರವರು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣಾ ಮೊ.ನಂ : ೧೩/೨೦೨೧ ಕಲಂ–೭(ಎ) ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ–೧೯೮೮ (ತಿದ್ದುಪಡಿ — ೨೦೧೮) ರ ಟ್ರ್ಯಾಪ್ ಪ್ರಕರಣವನ್ನು ನ್ಯಾಯಾಲಯದ ವಿಶೇಷ ಪ್ರಕರಣ ಸಂಖ್ಯೆ : ೩೨೯/೨೦೨೩ ರಲ್ಲಿ ವಿಚಾರಣೆ ನಡೆಸಿ, ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾಗಿ ನಾಗರಾಜು ಎಸ್ ರವರನನ್ನು ದೋಷಿ ಎಂದು ಘನ ನ್ಯಾಯಾಲಯದಲ್ಲಿ ಘೋಷಿಸಿ. ದಿನಾಂಕ : ೨೪/೧೦/೩೦೨೪ ರಂದು ೭(ಎ) ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ–೧೯೮೮ (ತಿದ್ದುಪಡಿ — ೨೦೧೮) ರ ಅಡಿಯಲ್ಲಿ ಆರೋಪಿಗೆ ಮೂರು ವರ್ಷಗಳ ಕಠಿಣ ಕಾರಾಗೃಹಕ ಶಿಕ್ಷೆ ಮತ್ತು ಹತ್ತು ಸಾವಿರ ದಂಡ ವಿಧಿಸಿದೆ. ದಂಡದ ಹಣ ಕಟ್ಟಲು ವಿಫಲವಾದಲ್ಲಿ ೦೬ ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಎಂದು ವಿಧಿಸಿ ತೀರ್ಪು ಹೊರಡಿಸಲಾಗಿದೆ.
ಈ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯ ಪರವಾಗಿ ಕರ್ನಾಟಕ ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಆರ್.ಪಿ.ಪ್ರಕಾಶ್ ವಾದ ಮಂಡಿಸಿದ್ದಾರೆ..
ಭ್ರಷ್ಟ ಪಿಡಿಓ ನಾಗರಾಜು ಎಸ್ ವಿರುದ್ಧದ ಪ್ರಕರಣದ ಹಿನ್ನೆಲೆ:
ದೂರುದಾರರಾದ ಮಧು ಎಚ್.ಇ. ಹೊಯ್ಸಳಕಟ್ಟೆ ಗ್ರಾಮದ ಖಾಯಂ ವಾಸಿಯಾಗಿದ್ದು. ಅವರ ತಾಯಿ ಮಲ್ಲಮ್ಮ ಎಂಬುವರ ಹೆಸರಿನಲ್ಲಿದ್ದ ನಿವೇಶನದ ಇ — ಸ್ವತ್ತು ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಈ ಸ್ವತ್ತು ಮಾಡಿಕೊಡಲು ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ನಾಗರಾಜು ಎಸ್ ದೂರುದಾರ ಮಧು ಎಚ್ ಇ ರವರಿಂದ ೨೧೫೦/- ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಚಾರವಾಗಿ ಅಂದಿನ ಭ್ರಷ್ಟಾಚಾರ ನಿಗ್ರಹದಳ ತುಮಕೂರು ಪೊಲೀಸ್ ಠಾಣೆಗೆ ದೂರುದಾರ ಮಧು ಹೆಚ್ ಇ ಮತ್ತು ಅವರ ತಾಯಿ ಮಲ್ಲಮ್ಮ ದೂರು ನೀಡಿದ್ದರು..
ಭ್ರಷ್ಟಾಚಾರ ನಿಗ್ರಹ ದಳದಿಂದ ಯಶಸ್ವಿ ಕಾರ್ಯಾಚರಣೆ:
ದೂರುದಾರರಿಗೆ ಲಂಚ ನೀಡಿ ಕೆಲಸ ಮಾಡಿಕೊಳ್ಳಲು ಇಷ್ಟವಿಲ್ಲದೆ ದಿನಾಂಕ : ೦೭/೦೯/೨೦೨೧ ರಂದು ತುಮಕೂರು ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಪೊಲೀಸ್ ಉಪಾಶಿಕ್ಷಕರಾದ ಮಲ್ಲಿಕಾರ್ಜುನ್ ಚುಕ್ಕಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ನಂತರ ಪೊಲೀಸ್ ನಿರೀಕ್ಷಕರಾದ ಎಸ್ ವಿಜಯಲಕ್ಷ್ಮಿ ರವರ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು ದಿನಾಂಕ : ೦೮/೦೯/೨೦೨೧ ರಂದು ಬೆಳಿಗ್ಗೆ ೧೧:೩೫ ಗಂಟೆಯ ಸಮಯದಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದ ತಾಲೂಕು ಪಂಚಾಯಿತಿ ಮುಂಭಾಗದಲ್ಲಿರುವ ಪುಷ್ಪಕ್ ಆಪ್ಟಿಕಲ್ಸ್ ಮತ್ತು ಕಣ್ಣು ಪರೀಕ್ಷಾ ಕೇಂದ್ರದ ಬಳಿ ಲಂಚದ ಹಣವಾದ ೨೧೫೦/- ರೂಗಳನ್ನು ಮಧು ಎಚ್ ಇ ರವರಿಂದ ಪಿಡಿಓ ನಾಗರಾಜು ಹಣ ಸ್ವೀಕರಿಸುತ್ತಿದ್ದ ವೇಳೆ ಅಧಿಕಾರಿಗಳು ಟ್ರ್ಯಾಪ್ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಎಸ್ ವಿಜಯಲಕ್ಷ್ಮಿ, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಮರೆಡ್ಡಿ ಕೆ, ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q