ಅರಸೀಕೆರೆ: ಸರ್ಕಾರಿ ಪ್ರೌಢಶಾಲೆ ಅರಸೀಕೆರೆ ಶಾಲೆಯ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ ಸೇರ್ಪಡೆಯಾಗಿದ್ದು, ಇಡೀ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮವಾಗಿ ಈ ಸಾಧನೆ ಮಾಡಿದಂತಾಗಿದೆ. ಇಲ್ಲಿನ 10 ತರಗತಿಯ ವಿದ್ಯಾರ್ಥಿ ಹೃತಿಕ್.ಹೆಚ್ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ ತನ್ನ ವಿಜ್ಞಾನ ಮಾದರಿಯಾದ ಶಾಲೆ ಮತ್ತು ಆಸ್ಪತ್ರೆಯ ಸೂಚನಾ ವ್ಯವಸ್ಥೆ ಮತ್ತು ಅಗ್ನಿನಂದಕ ರೋಬೋ ಕಾರ್ ವೈಯಕ್ತಿಕ ವಿಭಾಗದಲ್ಲಿ ಐದನೇ ಸ್ಥಾನಗಳಿಸಿದ ಹೆಗ್ಗಳಿಕೆ ಸಾಧಿಸಿದ್ದಾನೆ.
10ನೇ ತರಗತಿಯ ಹೃತಿಕ್ ಹೆಚ್. ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಬಹುಮಾನಗಳಿಸಿ ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆ ಆಗಿದ್ದರು. ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕೊಲ್ಲೂರಿನಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಗಾಡಿಯಂ ಶಾಲೆಯಲ್ಲಿ ದಿನಾಂಕ : 19—01–2026 ರಿಂದ 23—01–2026 ರವರೆಗೆ ಸುಮಾರು ಐದು ದಿನಗಳ ಕಾಲ ನಡೆದ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವು ಶುಕ್ರವಾರ ಮುಕ್ತಾಯವಾಗಿದ್ದು, ಈ ವಿಜ್ಞಾನ ಮೇಳದಲ್ಲಿ ಅವರು ಪ್ರದರ್ಶಿಸಿದ ಮಾದರಿ ವೈಯಕ್ತಿಕ ವಿಭಾಗದಲ್ಲಿ ಐದನೇ ಸ್ಥಾನ ಗಳಿಸಿದೆ. ಈ ವಿದ್ಯಾರ್ಥಿಯು ತಯಾರಿಸಿದ ಮಾದರಿಯ ವಿಶೇಷತೆ ಏನೆಂದರೆ ಶಾಲೆ ಮತ್ತು ಆಸ್ಪತ್ರೆಯ ಹತ್ತಿರ ಯಾವುದೇ ವಾಹನಗಳು ಬಂದಾಗ ತಕ್ಷಣವೇ ಸೆನ್ಸಾರ್ ಮೂಲಕ ಸೂಚನಾ ವ್ಯವಸ್ಥೆ ಮತ್ತು ಯಾವುದೇ ಬೆಂಕಿ ಅವಘಡಗಳು ಸಂಭವಿಸಿ ದಾಗ ತಕ್ಷಣವೇ ಮಾಹಿತಿಯನ್ನು ಸ್ವೀಕರಿಸಿ ಅಗ್ನಿ ನಂದಕವಾಗಿ ಕಾರ್ಯನಿರ್ವಹಿಸುವ ರೋಬೋ ಕಾರ್ ನ ಮಾದರಿಯನ್ನು ಪ್ರದರ್ಶಿಸಲಾಗಿತ್ತು. ಇದರಲ್ಲಿ ಸುಮಾರು ದಕ್ಷಿಣ ಭಾರತದ ಕರ್ನಾಟಕ, ಆಂದ್ರಪ್ರದೇಶ, ತಮಿಳುನಾಡು ಕೇರಳ, ಪುದುಚೇರಿ ಮತ್ತು ತೆಲಂಗಾಣ ರಾಜ್ಯಗಳಿಂದ ಭಾಗವಹಿಸಿದ್ದರು.
ಅಭಿನಂದನಾ ಕಾರ್ಯಕ್ರಮದಲ್ಲಿ SISFನ ನಿರ್ದೇಶಕರಾದ ಶಂಕರ್, ಕರ್ನಾಟಕ ರಾಜ್ಯದ ನೋಡಲ್ ಅಧಿಕಾರಿಯಾದ ಶಶಿಧರ್ ಕೇಸರಿ ADPI ಬೆಂಗಳೂರು ಮತ್ತು ದೀಪಕ್ ಕುಲಕರ್ಣಿ DIET ಧಾರವಾಡದ ಹಿರಿಯ ಉಪನ್ಯಾಸಕರು ಹಾಗೂ ತೆಲಂಗಾಣ ರಾಜ್ಯದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.
ಆಧುನಿಕ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿದ ಮಾದರಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು. ಈ ಸಾಧನೆಯ ಹಿಂದೆ ಸರ್ಕಾರಿ ಪ್ರೌಢಶಾಲೆ, ಅರಸೀಕೆರೆಯ ಮಿನಿ ವಿಜ್ಞಾನ ಸಂಪನ್ಮೂಲ ಕೇಂದ್ರ ಹಾಗೂ ಮಾರ್ಗದರ್ಶಿ ಶಿಕ್ಷಕರು ಮತ್ತು ಪ್ರಭಾರಿ ಮುಖ್ಯಶಿಕ್ಷಕರಾದ ರೇಣುಕರಾಜ್ ಜಿ.ಹೆಚ್.ರವರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಪ್ರಮುಖ ಪಾತ್ರವಹಿಸಿದೆ. ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ ಚಿಂತನೆ ಹಾಗೂ ನವೋದ್ಯಮ ಮನೋಭಾವ ಬೆಳೆಸುವಲ್ಲಿ ವಿಜ್ಞಾನ ಸಂಪನ್ಮೂಲ ಕೇಂದ್ರದ ಪ್ರಯೋಗಾಲಯ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಈ ಸಾಧನೆ ಸಾಕ್ಷಿಯಾಗಿದೆ.
ವಿದ್ಯಾರ್ಥಿ ಹೃತಿಕ್.ಹೆಚ್ ಮತ್ತು ಮಾರ್ಗದರ್ಶಕ ಶಿಕ್ಷಕ ರೇಣುಕರಾಜ್ ಜಿ.ಹೆಚ್ ಅವರ ಸಾಧನೆಗೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಮಾಧವರೆಡ್ಡಿ, ಡಯಟ್ ಪ್ರಾಂಶುಪಾಲರಾದ ಗಂಗಾಧರ್, ಪಾವಗಡದ ಕ್ಷೇತ್ರಶಿಕ್ಷಣಾಧಿಕಾರಿಗಳಾದ ರೇಣುಕಮ್ಮಎಂ., ಬಿ.ಆರ್.ಸಿ.ವೆಂಕಟೇಶಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪ್ರೇಮ್ ಕುಮಾರ್, ಉಪಾಧ್ಯಕ್ಷಿಣಿ ಕವಿತಮ್ಮ ಮತ್ತು ಸರ್ವ ಸದಸ್ಯರು, ಪ್ರಭಾರಿ ಮುಖ್ಯ ಶಿಕ್ಷಕ ರೇಣುಕರಾಜ್ ಜಿ.ಹೆಚ್., ಶಿಕ್ಷಕರಾದ ಹನುಮೇಶ್ ಎನ್., ಮೋಹನ್ ಕುಮಾರ್ ಜಿ.ಕೆ., ಕುಮಾರ್ ಎಸ್., ಅಭಿಷೇಕ್ ಎಂ.ವಿ.ಶಿಕ್ಷಕಿಯರಾದ ವಿಮಲಾ ಆರ್., ರಶ್ಮಿ ಸಿ.ಎಸ್., ಮಾನಸ ಎನ್., ಶ್ರೀಲಕ್ಷ್ಮೀ ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಾಧನೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


