ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನು ಡ್ರಗ್ಸ್ ಹಬ್ ಆಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಹುಬ್ಬಳ್ಳಿ-ಧಾರವಾಡ ಪೊಲೀಸರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಷೇಧಿತ ವಸ್ತುಗಳ ಸರಬರಾಜನ್ನು ತಡೆಗಟ್ಟಲು ಹಾಗೂ ದಂಧೆಕೋರರ ಮೇಲೂ ನಿಗಾ ವಹಿಸಲು ಗೃಹ ಇಲಾಖೆ ಸನ್ನದ್ಧವಾಗಿದೆ. ಇನ್ನು ಮೂರು ತಿಂಗಳಲ್ಲಿ ಜಿಲ್ಲೆಯನ್ನು ‘ಮಾದಕ ವಸ್ತು ಮುಕ್ತ’ ಎಂದು ಘೋಷಿಸಲಾಗುವುದು ಎಂದು ತಿಳಿಸಿದರು.
ಇಡೀ ರಾಜ್ಯದಲ್ಲಿ ಡ್ರಗ್ಸ್ ನಿಲ್ಲಿಸಲು ನಿರ್ಧರಿಸಿದ್ದೇವೆ. ಹು-ಧಾಗೆ ಗೋವಾ, ಒಡಿಶಾಗಳಿಂದ ಡ್ರಗ್ಸ್ ಬರಬಹುದು. ಇಲ್ಲಿಯ ಜನರಿಗೆ ಅನಾಹುತ ಆಗಬಾರದು ಎಂದು ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಆರು ತಿಂಗಳು ಅವಕಾಶ ನೀಡಿದ್ದೇನೆ. ಇದನ್ನು ತಡೆಗಟ್ಟದಿದ್ದರೆ ನಂತರ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಡ್ರಗ್ಸ್ ಹಬ್ ಆಗಲು ಬಿಡುವುದಿಲ್ಲ ಎಂದು ಪುನರುಚ್ಚರಿಸಿದ್ರು.
ಧಾರವಾಡ ಜಿಲ್ಲೆ ಮತ್ತು ಅವಳಿ ನಗರದ ಅಪರಾಧ ಪ್ರಮಾಣ ರಾಜ್ಯದ ಇತರ ಭಾಗಗಳಿಗಿಂತ ಭಿನ್ನವಾಗಿಲ್ಲ ಎಂದ ಸಚಿವರು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಅಪರಾಧವನ್ನು ಕಡಿಮೆ ಮಾಡಲು ಪೊಲೀಸರಿಗೆ ಸೂಚನೆ ನೀಡಿದರು.


