ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಗರ್ಭಿಣಿ ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಬಳಿಕ ಪತಿಯು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.
ಘಟನೆಯ ವಿವರ:
ರಾಮದುರ್ಗ ಪಟ್ಟಣದ ನಿವಾಸಿ ಉಮೇಶ ಬಡಿಗೇರ (34) ಮೃತಪಟ್ಟ ವ್ಯಕ್ತಿ. ಕಳೆದ ನಾಲ್ಕೈದು ವರ್ಷಗಳಿಂದ ಕುಡಿತದ ಚಟಕ್ಕೆ ದಾಸನಾಗಿದ್ದ ಉಮೇಶ, ಪದೇ ಪದೇ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಘಟನೆಯ ದಿನದಂದು ಸಾರಾಯಿ ಕುಡಿದು ಬಂದು ಪತ್ನಿಯ ಜೊತೆ ಗಲಾಟೆ ಮಾಡಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ, ಪತ್ನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ.
ಪತ್ನಿಯ ಮೇಲೆ ಹಲ್ಲೆ ನಡೆಸಿದ ಬಳಿಕ ಉಮೇಶ ಪಟ್ಟಣದ ಹೊರವಲಯದ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಗರ್ಭಿಣಿ ಪತ್ನಿಯನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತನ ಸಹೋದರ ನಾರಾಯಣ ಬಡಿಗೇರ ಅವರು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. “ನನ್ನ ಅಣ್ಣ ಕುಡಿತದ ಚಟಕ್ಕೆ ಬಲಿಯಾಗಿ ಪತ್ನಿಯೊಂದಿಗೆ ಜಗಳವಾಡಿ ಈ ನಿರ್ಧಾರ ತೆಗೆದುಕೊಂಡಿದ್ದಾನೆ, ಆತನ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ರಾಮದುರ್ಗ ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೌಟುಂಬಿಕ ಕಲಹವೇ ಈ ಘಟನೆಗೆ ಪ್ರಾಥಮಿಕ ಕಾರಣವೆಂದು ತಿಳಿದುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


