ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಗೀತಾ (33) ಅವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿರುವ ಆರೋಪಿ ಪತಿ ಶಂಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
‘ಸ್ಥಳೀಯ ಶಿವಾನಂದನಗರದ ನಿವಾಸಿ ಗೀತಾ ಅವರನ್ನು ಬುಧವಾರ ತಡರಾತ್ರಿ ಕೊಲೆ ಮಾಡಲಾಗಿದೆ. ಕೃತ್ಯದ ನಂತರ ಗೀತಾ ತಾಯಿಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಮಗಳನ್ನು ಕೊಲೆ ಮಾಡಿದ್ದೇನೆ’ ಎಂಬುದಾಗಿ ತಿಳಿಸಿದ್ದ. ನಂತರ, ಆತ ಠಾಣೆಗೆ ಬಂದು ಶರಣಾಗಿದ್ದಾನೆ’ ಎಂದು ಪೊಲೀಸ್
ಮೂಲಗಳು ಹೇಳಿವೆ.’ಗೀತಾ ಕೊಲೆ ಬಗ್ಗೆ ಸಂಬಂಧಿಕರು ದೂರು ನೀಡಿದ್ದಾರೆ. ಶಂಕರ್‌ನನ್ನು ಬಂಧಿಸಲಾಗಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ತಿಳಿಸಿವೆ.
ಪರ ಪುರುಷನ ಜೊತೆ ಸಲುಗೆ: ‘ಸ್ಥಳೀಯ ನಿವಾಸಿ ಶಂಕರ್ ಹಾಗೂ ಹೊಸೂರಿನ ಗೀತಾ, ಹದಿಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ದಂಪತಿ ನಡುವೆ ಜಗಳ ಶುರುವಾಗಿತ್ತು. ಇದರ ನಡುವೆಯೇ ಪರ ಪುರುಷನ ಜೊತೆ ಗೀತಾ ಸಲುಗೆ ಇಟ್ಟುಕೊಂಡಿದ್ದರೆಂಬ ಮಾಹಿತಿ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪತ್ನಿಯ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದ ಶಂಕರ್, ಹಲವು ಬಾರಿ ಜಗಳ ತೆಗೆದಿದ್ದ. ಇದೇ ವಿಚಾರವಾಗಿ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಗೀತಾ ಅವರು ಪರ ಪುರುಷನ ಜೊತೆಗಿದ್ದ ಫೋಟೊ ಹಾಗೂ ವಿಡಿಯೊಗಳು ಶಂಕರ್‌ಗೆ ಸಿಕ್ಕಿದ್ದವು. ಇದರಿಂದ ಆತ ಮತ್ತಷ್ಟು ಕೋಪಗೊಂಡಿದ್ದ’ ಎಂದು ಮೂಲಗಳು ತಿಳಿಸಿವೆ.
ತಲೆಗೆ ಆಯುಧದಿಂದ ಹೊಡೆದು ಕೊಲೆ: ಪತ್ನಿ ಗೀತಾ ಜೊತೆ ಆರೋಪಿ ಶಂಕರ್ ಬುಧವಾರ ರಾತ್ರಿ ಜಗಳ ತೆಗೆದಿದ್ದ. ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆರೋಪಿ, ಪತ್ನಿಯ ತಲೆಗೆ ಆಯುಧದಿಂದ ಹೊಡೆದಿದ್ದ. ತೀವ್ರ ರಕ್ತಸ್ರಾವದಿಂದ ಗೀತಾ ಮೃತಪಟ್ಟಿದ್ದರು.
‘ಸೋಫಾ ಮೇಲೆ ಮೃತದೇಹ ಇರಿಸಿದ್ದ ಆರೋಪಿ, ಗೀತಾ ಅತ್ತೆಗೆ ಕರೆ ಮಾಡಿದ್ದ. ‘ನಿಮ್ಮ ಮಗಳು ಬೇರೆ ಪುರುಷನ ಜೊತೆ ಸಲುಗೆ ಇಟ್ಟುಕೊಂಡಿದ್ದಳು. ಇದರ ವಿಡಿಯೊ ನನಗೆ ಸಿಕ್ಕಿದ್ದವು. ಹೀಗಾಗಿ, ನಿಮ್ಮ ಮಗಳನ್ನು ಕೊಲೆ ಮಾಡಿದ್ದೇನೆ. ನಾನು ಪೊಲೀಸರಿಗೆ ಶರಣಾಗಲು ಠಾಣೆಗೆ ಹೊರಟಿದ್ದೇನೆ’ ಎಂಬುದಾಗಿ ಹೇಳಿದ್ದ. ನಂತರವೇ ಹೊಸೂರಿನಲ್ಲಿದ್ದ ಗೀತಾ ಪೋಷಕರು ನಗರಕ್ಕೆ ಬಂದಿದ್ದರು’ ಎಂದು ಮೂಲಗಳು ತಿಳಿಸಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


