ಕುಣಿಗಲ್: ತಾಲ್ಲೂಕಿನಲ್ಲಿ ಹೈನುಗಾರಿಕೆಯ ಪ್ರಗತಿಗೆ ಶಾಸಕರೇ ಅಡ್ಡಿಯಾಗಿದ್ದಾರೆ ಎಂದು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಡಿ.ಕೃಷ್ಣಕುಮಾರ್ ಆರೋಪಿಸಿದ್ದು, ತಾಲ್ಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಾರಂಭಕ್ಕೆ ವಿಫುಲ ಅವಕಾಶವಿದ್ದರೂ, ಅನಾನುಭವಿ ಶಾಸಕರ ಪ್ರಜ್ಞೆಯಿಂದಾಗಿ ಮತ್ತು ರಾಜಕಾರಣದಿಂದಾಗಿ ಸಂಘಗಳ ರಚನೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ತಾಲ್ಲೂಕಿನ ಗವಿಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರಾದೇಶಿಕ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಒಕ್ಕೂಟವು ರೂ. 27 ಕೋಟಿ ನಷ್ಟದಲ್ಲಿದ್ದರೂ, ಹಾಲು ಉತ್ಪಾದಕರ ಕೈಹಿಡಿದಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಾರಂಭಕ್ಕೆ ವಿಫುಲ ಅವಕಾಶವಿದ್ದರೂ, ಅನಾನುಭವಿ ಶಾಸಕರ ಪ್ರಜ್ಞೆಯಿಂದಾಗಿ ಮತ್ತು ರಾಜಕಾರಣದಿಂದಾಗಿ ಸಂಘಗಳ ರಚನೆ ಸಾಧ್ಯವಾಗಿಲ್ಲ ಎಂದ ಅವರು ಆರೋಪಿಸಿದರು.
ಕಳೆದ ಸಾಲಿನಲ್ಲಿ 218 ರಾಸುಗಳು ಮೃತಪಟ್ಟಿದ್ದು 87 ಲಕ್ಷ ರೂ. ಪರಿಹಾರ ಧನ, 52 ಮಂದಿ ಮೃತಪಟ್ಟಿದ್ದು 26 ಲಕ್ಷ ರೂ. ಪರಿಹಾರಧನ, 90 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗಿದೆ. ಇಬ್ಬರು ಪಶುವೈದ್ಯರನ್ನು ಮತ್ತು ಸಂಚಾರಿ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಿದ್ದು, ಪಶುವೈದ್ಯಕೀಯ ಸೇವೆಗಳನ್ನು ನೀಡಲಾಗುತ್ತಿದೆ. ಸಂಘಗಳ ಚುನಾವಣೆಯಲ್ಲಿ ರಾಜಕಾರಣಕ್ಕೆ ಮಹತ್ವ ನೀಡದೆ ಅವಿರೋಧ ಆಯ್ಕೆಗೆ ಶ್ರಮಿಸಿ, ಚುನಾವಣಾ ವೆಚ್ಚವನ್ನು ಸಂಘಗಳ ಕಟ್ಟಡ ನಿರ್ಮಾಣಕ್ಕೆ ಸೇರಿದಂತೆ ಉತ್ಪಾದಕರ ಅನುಕೂಲಕ್ಕೆ ಬಳಸಬೇಕು ಎಂದು ಮನವಿ ಮಾಡಿದರು.