ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಜೆಡಿಎಸ್ ಪಕ್ಷವನ್ನು ಬಿಡಲಿಲ್ಲ. ನನ್ನನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಅನಂತರ ನನಗೆ ಬೇರೆ ದಾರಿ ಇಲ್ಲದೆ ಅಹಿಂದ ಸಂಘಟನೆ ಮಾಡಿದ್ದೆ. ಈಗ ಹಾಸನದಲ್ಲಿ ಸಮಾವೇಶ ನಡೆಸುತ್ತಿರುವುದರ ಹಿಂದೆ ಇಡೀ ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಂಗಲ್ ಹನುಮಂತಯ್ಯ ಅವರ ಪುಣ್ಯಸರಣೆ ಅಂಗವಾಗಿ ವಿಧಾನಸೌಧದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿ ಸಂಘಟನೆಗಳು ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಆಹ್ವಾನಿಸಲಾಗಿದೆ. ಪಕ್ಷ ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ಎಂದು ಹೇಳಿದರು.
ಹಿಂದೆ ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಿದಾಗ ನಾನು ಏನು ಮಾಡಬೇಕಿತ್ತು? ವಿರೋಧ ಮಾಡುವ ಸಲುವಾಗಿ ಅಹಿಂದ ಸಂಘಟನೆ ಮಾಡಬೇಕಾಯಿತು. ಜಾತ್ಯತೀತ ಜನತಾದಳ ಪಕ್ಷ ಕಟ್ಟಿದವರು ನಾವು. ಈಗ ಕೋಮುವಾದಿಗಳ ಜೊತೆ ಸೇರಿದ ಮೇಲೆ ಜೆಡಿಎಸ್ ಜಾತ್ಯತೀತವಾಗಿ ಉಳಿದಿದೆಯೇ? ಎಂದು ಕಿಡಿಕಾರಿದರು.
ಸಂವಿಧಾನದಲ್ಲಿ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆ ಸೇರ್ಪಡೆಯಾಗಿದೆ. ಸುಪ್ರೀಂಕೋರ್ಟ್ ಸಂವಿಧಾನದಲ್ಲಿ ಜಾತ್ಯತೀತತೆ ಇರಬೇಕು ಎಂದು ಅಭಿಪ್ರಾಯಪಟ್ಟಿದೆ. ಜೆಡಿಎಸ್ನಲ್ಲಿ ಅದು ಉಳಿದಿಲ್ಲ ಎಂದರು.
ಜೆಡಿಎಸ್ ಪಕ್ಷ ಸ್ಥಾಪನೆಯಾದಾಗ ಕುಮಾರಸ್ವಾಮಿ ಇರಲಿಲ್ಲ. ಹೀಗಾಗಿ ಅದರ ಹಿನ್ನೆಲೆ ಅವರಿಗೆ ಗೊತ್ತಿಲ್ಲ. ನಾನು, ದೇವೇಗೌಡರು, ಸತೀಶ್ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ಸಿ.ಎಂ.ಇಬ್ರಾಹಿಂ, ವೆಂಕಟೇಶ್, ಲಕ್ಷ್ಮೀ ಸಾಗರ್ ಸೇರಿ ಪಕ್ಷ ಸ್ಥಾಪನೆ ಮಾಡಿದೆವು. ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ನಾನು ರಾಜ್ಯ ಅಧ್ಯಕ್ಷನಾಗಿದ್ದೆ ಎಂದು ವಿವರಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx