ರಾಮನಗರ: ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದಲ್ಲಿ ನಡೆದ ವೈ.ಜಿ. ಗುಡ್ಡ ಏತ ನೀರಾವರಿ ಯೋಜನೆಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ತಮ್ಮ ರಾಜಕೀಯ ಭವಿಷ್ಯದ ಕುರಿತು ನೀಡಿದ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಸುರೇಶ್, “ಮುಂದೆ ನಾನು ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ನನಗೆ ಗೊತ್ತಿಲ್ಲ. ಸದ್ಯಕ್ಕೆ ನನ್ನನ್ನು ಬಮೂಲ್ (BAMUL) ಅಧ್ಯಕ್ಷನನ್ನಾಗಿ ಮಾಡಿದ್ದಾರೆ, ಅಂದರೆ ಹಾಲು ಮಾರುವ ಕೆಲಸ ಕೊಟ್ಟಿದ್ದಾರೆ. ಸದ್ಯಕ್ಕೆ ಆ ಕೆಲಸವನ್ನೇ ಮಾಡುತ್ತಿದ್ದೇನೆ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಮಾಗಡಿಯ ಸುಮಾರು 18 ಕೆರೆಗಳಿಗೆ ಕಾವೇರಿ ನೀರನ್ನು ತುಂಬಿಸುವ 115 ಕಿ.ಮೀ. ದೂರದ ಈ ಬೃಹತ್ ಯೋಜನೆಯನ್ನು ಜಾರಿಗೊಳಿಸುತ್ತಿರುವುದಾಗಿ ಅವರು ತಿಳಿಸಿದರು. ಈ ಹಿಂದೆ ಅಸಾಧ್ಯವೆನ್ನಲಾಗಿದ್ದ ಯೋಜನೆಯನ್ನು ನಾವು ಕಾರ್ಯಗತಗೊಳಿಸುತ್ತಿದ್ದೇವೆ ಎಂದು ಅವರು ಹೆಮ್ಮೆಯಿಂದ ಹೇಳಿದರು.
“ನಾವು ಸುಳ್ಳು ಭರವಸೆ ನೀಡುವುದಿಲ್ಲ ಅಥವಾ ಜನರ ಮುಂದೆ ಕಣ್ಣೀರು ಹಾಕುವುದಿಲ್ಲ. ನಾವು ಕೆಲಸ ಮಾಡುವ ಮೂಲಕ ಉತ್ತರ ನೀಡುತ್ತೇವೆ” ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದರು.
ಅಭಿವೃದ್ಧಿ ಕಾರ್ಯಗಳು: ಬೆಂಗಳೂರು ಗ್ರಾಮಾಂತರ ಭಾಗದ ನೀರಿನ ಸಮಸ್ಯೆ ನೀಗಿಸಲು ಡಿ.ಕೆ. ಶಿವಕುಮಾರ್ ಅವರು ಶ್ರಮಿಸುತ್ತಿದ್ದಾರೆ. ಸತ್ತೇಗಾಲ ನೀರಾವರಿ ಯೋಜನೆಯು ಇನ್ನು ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡರು.
ಸತತ ಸೋಲಿನ ನಂತರ ಹಾಗೂ ಬಮೂಲ್ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಸುರೇಶ್ ಅವರು ನೀಡಿರುವ ಈ ಹೇಳಿಕೆಯು, ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿಯುತ್ತಿದ್ದಾರೆಯೇ ಅಥವಾ ಇದು ಕೇವಲ ರಾಜಕೀಯ ತಂತ್ರಗಾರಿಕೆಯ ಶೈಲಿಯೇ ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


