ಮೈಸೂರು: ದಸರಾ ನಂತರ ಮೈಸೂರಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಅನಿಸುತ್ತದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ದಸರಾ ನಂತರ ಮೈಸೂರಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಅನಿಸುತ್ತದೆ. ಈ ಬಾರಿ ದಸರಾ ಸಂಪೂರ್ಣ ಗೊಂದಲವಾಯಿತು. ಪಾಸ್ ಇದ್ದವರ ದಸರಾ ಆಯಿತು, ಉಳ್ಳವರು ದಸರಾ ದರ್ಬಾರ್ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತಿಹಾಸದಲ್ಲಿ ಮೈಸೂರು ಸ್ವಚ್ಛತೆ, ಒಳ್ಳೆಯ ಆಡಳಿತಕ್ಕೆ ಹೆಸರುವಾಸಿಯಾಗಿದೆ. ಆದರೆ, ಇತ್ತೀಚೆಗೆ ಕಾನೂನು ಆಡಳಿತ ಕುಸಿಯುತ್ತಿದೆ. ಈ ಹಿಂದೆ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಆಯ್ತು. 340 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಯಿತು. ಮಹಾರಾಷ್ಟ್ರ ಪೊಲೀಸರು ಇದನ್ನು ಕಂಡು ಹಿಡಿದರು. ಅರಮನೆ ಮುಂಭಾಗ ಮೊನ್ನೆ ಒಂದು ಕೊಲೆ ಆಯ್ತು. ನಿನ್ನೆ ಚಿಕ್ಕ ಮಗು ಮೇಲೆ ರೇಪ್ ಅಂಡ್ ಮರ್ಡರ್ ಆಯ್ತು. ಬಲೂನ್ ಮಾರಾಟ ಮಾಡುವ ಮಗು ಮೇಲೆ ಹೀನ ಕೃತ್ಯ ಆಗಿದೆ. ಮೈಸೂರಿನಲ್ಲಿ ಇಂತಹ ಘಟನೆಗಳು ಈ ಹಿಂದೆ ಆಗಿಲ್ಲ ಎಂದರು.
ಕಾನೂನು ಸುವ್ಯವಸ್ಥೆ ಹಾಳಾಗಿದೆ. ನಗರದ ಹೃದಯ ಭಾಗದಲ್ಲೇ ಇಂತಹ ಘಟನೆಗಳು ನಡೆದರೆ ಹೇಗೆ?. ಕಿಡಿಗೇಡಿಗಳಿಗೆ ಯಾವುದೇ ರೀತಿಯ ಭಯ ಇಲ್ಲ. ಸಿಎಂ ಸಿದ್ದರಾಮಯ್ಯ ಚುನಾವಣೆಯಲ್ಲಿ ಇದು ನನ್ನ ತವರು ಅಂತಾರೆ. ಈಗ ಇಂತಹ ಘಟನೆಗಳನ್ನು ಆಗದಂತೆ ತಡೆಯಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC