ತುಮಕೂರು: ಜಿಲ್ಲೆಯ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು. ತುಮಕೂರಿನ ಯುವಜನತೆ ಇದರ ಸದುಪಯೋಗ ಪಡೆದು ವಿಶ್ವಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತುಮಕೂರಿನಲ್ಲಿ ಆಯೋಜಿಸಿದ್ದ “ಕರ್ನಾಟಕ ಕ್ರೀಡಾಕೂಟ -2025 – 2026″ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡೆಯಿಂದ ಜೀವನದಲ್ಲಿ ಶಿಸ್ತು, ಸಂಯಮ, ಸಮಯಪ್ರಜ್ಞೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು, ಇದರ ರೂವಾರಿಯಾಗಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಅಭಿನಂದನೆಗಳು ಎಂದರು.
ನಾನು ವಿದ್ಯಾರ್ಥಿದೆಸೆಯಲ್ಲಿ ಕಬಡ್ಡಿ ಪಟುವಾಗಿದ್ದೆ, ಅದರೊಂದಿಗೆ ಫುಟ್ ಬಾಲ್, ಕ್ರಿಕೆಟ್ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದೆ. ಅದರಿಂದ ಈಗಾಗಲೂ ಆಗಾಗ್ಗೆ ಏಕದಿನ ಕ್ರಿಕೆಟ್, ಟಿ.–20 ಕ್ರಿಕೆಟ್ ನೋಡುತ್ತೇನೆ. ಕೆಲಸದೊತ್ತಡದ ನಡುವೆಯೂ ಅಂತರರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ವೀಕ್ಷಿಸುವುದನ್ನು ತಪ್ಪಿಸುವುದಿಲ್ಲ ಎಂದರು.
ಕ್ರೀಡೆಯಲ್ಲಿ ಸೋಲು — ಗೆಲುವು ಮುಖ್ಯವಲ್ಲ, ಕ್ರೀಡಾಸ್ಪೂರ್ತಿ ಮುಖ್ಯ. ಪ್ರತಿ ಕ್ರೀಡಾಪಟುವು ಇದನ್ನು ಪಾಲಿಸಬೇಕು. ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದ್ದು, ಕಠಿಣ ಶ್ರಮ ಅತ್ಯಗತ್ಯ. ಪರಿಶ್ರಮದಿಂದ ಗುರಿ ಸಾಧಿಸಲು ಉತ್ತಮ ತರಬೇತಿ ಅಗತ್ಯ ಎಂದರು.
ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯ ನಿಯಮವನ್ನು ಜಾರಿಗೊಳಿಸಿದೆ. ಪೊಲೀಸ್ ಇಲಾಖೆಯಲ್ಲಿ ಪೇದೆ ಹುದ್ದೆಯಿಂದ ಆರಕ್ಷಕ ಉಪಾಧೀಕ್ಷಕರ ಹುದ್ದೆಯ ವರೆಗೆ ಶೇ.3 ರಷ್ಟು ಮೀಸಲಾತಿಯನ್ನು ಸರ್ಕಾರ ನೀಡುತ್ತಿದೆ. ಒಲಂಪಿಕ್ಸ್ , ಪ್ಯಾರಾ ಒಲಂಪಿಕ್ಸ್ , ಏಷಿಯನ್ ಗೇಮ್ಸ್, ಕಾಮನ್ ವೆಲ್ತ್ ಗೇಮ್ಸ್, ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಜೇತರಾದ/ಭಾಗವಹಿಸುವ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ವಿವಿಧ ಇಲಾಖೆಗಳಲ್ಲಿ ಶೇ.2 ರ ಮೀಸಲಾತಿಯನ್ನು ನೀಡಲಾಗುತ್ತಿದೆ. ಒಲಂಪಿಕ್ಸ್ ನಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.
ತುಮಕೂರು ಜಿಲ್ಲೆಗೆ ಹಾಕಿ ಕ್ರೀಡಾಂಗಣ, ವಿಶ್ವದರ್ಜೆಯ ಈಜುಕೊಳದ ಬೇಡಿಕೆಯಿದ್ದು, ಕ್ರೀಡೆಗಾಗಿ ಹೆಚ್ಚಿನ ಅನುದಾನ ನೀಡಲಾಗುವುದು. ತುಮಕೂರು ಜಿಲ್ಲೆಯಿಂದ ಉತ್ತಮ ಕ್ರೀಡಾಪಟುಗಳು ಹೊರಬಂದು, ವಿಶ್ವಮಟ್ಟದಲ್ಲಿ ನಾಡಿನ ಕೀರ್ತಿಯನ್ನು ಹೆಚ್ಚಿಸಲೆಂದು ಹಾರೈಸುತ್ತೇನೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


