ಮಲ್ಲಿಕಾರ್ಜುನ ಖರ್ಗೆ ಈ ದೇಶದ ಪ್ರಧಾನಿಯಾದರೆ ನಾನು ಸ್ವಾಗತಿಸುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಮಂತ್ರಿಯಾಗಲು ಸಮರ್ಥವಾಗಿರುವ ವ್ಯಕ್ತಿ. ಅವರು ಸಾಮಾನ್ಯ ವ್ಯಕ್ತಿಯ ಮಗನಾಗಿ ದೊಡ್ಡ ರಾಜಕಾರಣಿಯಾಗಿ ಬೆಳೆದು ಇಂದು ಪ್ರಧಾನಿಯಾಗುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಶೋಷಿತ ಸಮುದಾಯಗಳಿಂದ ಬಂದ ಇಂತಹ ನಾಯಕರು ಆಗಬೇಕು ಎಂದು ಹೆಚ್. ವಿಶ್ವನಾಥ್ ತಿಳಿಸಿದರು.
ರಾಮ ಮಂದಿರ ಉದ್ಘಾಟನೆಗೆ ಅಡ್ವಾಣಿ, ಮುರಳಿ ಮನೋಹರ ಜೋಶಿ ಬರೋದು ಬೇಡ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್. ವಿಶ್ವನಾಥ್, ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ. ರಾಮಮಂದಿರ ಹೋರಾಟದಲ್ಲಿ ಮುಂದಿದ್ದ ನಾಯಕ. ವಯಸ್ಸಿನ ಕಾರಣಕ್ಕೆ ಅವರನ್ನು ದೂರವಿಟ್ಟು ರಾಮಮಂದಿರ ಉದ್ಘಾಟನೆ ಮಾಡೋದು ತಪ್ಪು. ದೇವೇಗೌಡರಿಗೆ ವಯಸ್ಸಾಗಿದೆ ಅವರನ್ನು ಕರೆದಿದ್ದಾರೆ. ಕಾರ್ಯಕ್ರಮಕ್ಕೆ ಅಡ್ವಾಣಿ ಬಂದ್ರೆ ಕ್ರೆಡಿಟ್ ಮೋದಿಗೆ ಸಿಗಲ್ಲ. ಹಾಗಾಗಿ ಈ ರೀತಿ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿದರು.
ಪ್ರಧಾನಮಂತ್ರಿಗೆ ಮಾಧ್ಯಮ ಎದುರು ಬಂದು ನಿಲ್ಲುವ ತಾಕತ್ತು ಇಲ್ಲ. ಇಡೀ ಜಗತ್ತಿನ ಮುಂದೆ ಭಾರತದ ಮಾನ ಬೆತ್ತಲಾಗಿದೆ. ಸಂಸತ್ತನ್ನ,ಸಂಸತ್ತಿನ ಪ್ರಶ್ನೋತ್ತರಗಳನ್ನು ದುರ್ಬಲಗೊಳಿಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ದ್ರೋಹ ಮಾಡಿದಂತೆ. ಇಂಥಾ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡೋದೆ ಬೇಡ ಅಂದರೆ ಹೇಗೆ? ಇದು ನಮ್ಮ ದೇಶದ ಸಂವಿಧಾನ ವ್ಯವಸ್ಥೆಗೆ ಮಾರಕ. 141 ಜನರ ಅಮಾನತನ್ನ ವಾಪಸ್ ಪಡೆಯಬೇಕು. ಆರೋಗ್ಯಕರ ವಾತಾವರಣದಲ್ಲಿ ಚರ್ಚೆಗಳು ನಡೆಯಬೇಕು. ಭಾರತ ಸರ್ಕಾರವನ್ನ ನಾನು ಒತ್ತಾಯ ಮಾಡುತ್ತಿದ್ದೇನೆ. ಈ ಕೂಡಲೇ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕು ಎಂದು ಹೆಚ್. ವಿಶ್ವನಾಥ್ ಆಗ್ರಹಿಸಿದರು.


