ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ಬಂಧನವಾಗಿ ಕೋರ್ಟ್ ಆದೇಶದಂತೆ ಬಿಡುಗಡೆಯಾಗಿದ್ದಾರೆ. ಬಿಡುಗಡೆಯ ಬಳಿಕ ಅಂದು ನಡೆದ ಘಟನೆಯೇನು ಎಂಬ ಬಗ್ಗೆ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಸಿ.ಟಿ.ರವಿ ಮಾತನಾಡಿದರು.
ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಮುಗಿದ ಮೇಲೆ ಅಂಬೇಡ್ಕರ್ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪೊಲೀಸರು ಬಂದು ನನ್ನನ್ನು ಪ್ರತ್ಯೇಕವಾಗಿ ಬಂಧಿಸಿದರು. ಬಂಧನ ಬಳಿಕ ಖಾನಾಪುರ ಠಾಣೆಗೆ ಕರೆದೊಯ್ದಿದ್ದರು. ಅಲ್ಲಿಂದ, ಪೊಲೀಸರು ರಾತ್ರಿವಿಡೀ ಸವದತ್ತಿ, ರಾಮದುರ್ಗ, ನಂದಗಡ, ಕಿತ್ತೂರು ಸೇರಿದಂತೆ ಸುಮಾರು 420 ಕಿಮೀ ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಸುತ್ತಾಡಿಸಿದ್ದಾರೆ.
ರಾತ್ರಿಯಿಡೀ ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡುವಾಗ ಪೊಲೀಸರಿಗೆ ಕರೆಗಳು ಬರುತ್ತಿದ್ದು, ಆದೇಶಗಳನ್ನು ನೀಡಲಾಗುತ್ತಿತ್ತು, ಪೊಲೀಸರಿಗೆ ನಾನು ಪದೇ ಪದೇ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ಕೇಳಿದರೆ ಸರಿಯಾಗಿ ಉತ್ತರ ಕೊಡುತ್ತಿರಲಿಲ್ಲ. ಏನೋ ಪಿಸುಪಿಸು ಮಾತನಾಡುತ್ತಿದ್ದರು. ನನ್ನ ತಲೆಗೆ ಪೆಟ್ಟಾಗಿದ್ದರಿಂದ ತಲೆ ಸುತ್ತು ಬಂದಂತೆ, ವಾಂತಿ ಬಂದಂತೆ ಆಗುತ್ತಿತ್ತು.
ಪೊಲೀಸರಿಗೆ ಆಗಾಗ ಕರೆಗಳು ಬರುತ್ತಿತ್ತು. ಯಾರೋ ಮೇಲಿನ ಅಧಿಕಾರಿಗಳು ಅಥವಾ ಪ್ರಭಾವಿ ವ್ಯಕ್ತಿಗಳು ಕರೆ ಮಾಡಿ ಆದೇಶ ಮಾಡುತ್ತಿದ್ದರು. ನನಗೆ ಕೇಳಿಸಬಾರದು ಅಂತ ದೂರ ಹೋಗಿ ಮಾತನಾಡುತ್ತಿದ್ದರು ಎಂದು ಸಿ ಟಿ ರವಿ ಆರೋಪ ಮಾಡಿದ್ದಾರೆ.
ರಾತ್ರಿ ಹೊತ್ತಿನಲ್ಲಿ ಪೊಲೀಸರು ನನಗೆ ಮಾಹಿತಿ ನೀಡದೆ ಸುತ್ತಾಡಿಸಿದ್ದಾರೆ, ಕೇಳಿದರೆ ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ. ಮನೆಯಿಂದ ನನ್ನ ಪತ್ನಿ ಫೋನ್ ಮಾಡಿದರೆ ನಾನು ಲೈವ್ ಲೊಕೇಶನ್ ಹಾಕಿದ್ದೆ, ನಂತರ ಸ್ವಲ್ಪ ದೂರ ಹೋದ ಮೇಲೆ ಮೊಬೈಲ್ ಸಂಪರ್ಕ ಕಡಿತಗೊಂಡಿತು. ನಮ್ಮ ವಾಹನ ಹಿಂದೆ ನನ್ನ ಪಿ.ಎ ಸಿಬ್ಬಂದಿಯ ವಾಹನವನ್ನು ಸ್ವಲ್ಪ ದೂರ ಹೋದ ಮೇಲೆ ಬ್ಯಾರಿಕೇಡ್ ಹಾಕಿ ತಡೆದರು. ಅಂದರೆ ನನ್ನ ಕೊಲೆಗೆ ಸಂಚು ರೂಪಿಸಿದ್ದರೇ ಎಂಬ ಸಂದೇಹ ಬರುತ್ತಿದೆ ಎಂದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಜೀರ್ ಅಹ್ಮದ್ ಮತ್ತು ಚನ್ನರಾಜ್ ಹಟ್ಟಿಹೊಳಿ ಮೊದಲಾದವರು ನನ್ನ ಮೇಲೆ ಮಾತಿನ ಪ್ರಹಾರ ನಡೆಸಿ, ನಿನ್ನ ಕತೆಯನ್ನು ಮುಗಿಸಿ ಬಿಡುತ್ತೇವೆ ಅಂತ ಏರಿಬಂದರು, ನಾನು ಮಾರ್ಷಲ್ ಗಳ ರಕ್ಷಣೆಯಲ್ಲಿ ಸಭಾಪತಿಗಳ ಕೊಠಡಿಗೆ ಹೋದೆ ಎಂದರು.
ಕಾನೂನುಗಳನ್ನು ಕೈ ತೆಗೆದುಕೊಳ್ಳುವ ಅಧಿಕಾರ ಮಂತ್ರಿಗಳಿಗೆ ಕೊಟ್ಟಿಲ್ಲ. ಸದನದಲ್ಲಿ ದಾಖಲಾಗಿರುವ ಆಡಿಯೊ, ವಿಡಿಯೊ ಪರಿಶೀಲಿಸಿ ನನ್ನ ತಪ್ಪಿದ್ದರೆ ನನಗೆ ಶಿಕ್ಷೆಯಾಗಲಿ, ಅವರದ್ದು ತಪ್ಪಿದ್ದರೆ ಅವರಿಗೆ ಶಿಕ್ಷೆಯಾಗಲಿ ಎಂದು ಸಿ ಟಿ ರವಿ ಒತ್ತಾಯಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx