ತುಮಕೂರು: ಚುನಾಯಿತ ಪ್ರತಿನಿಧಿ ಮೇಲೆ ರಾಜಕೀಯ ಪಕ್ಷಗಳು ಹಿಡಿತ ಸಾಧಿಸುತ್ತಿವೆ. ಯಥೇಚ್ಛವಾಗಿ ಹಣ ಸಿಗುತ್ತದೆ ಎಂದು ಒಂದು ಪಕ್ಷದ ಗುಲಾಮರಾದರೆ ಈ ವ್ಯವಸ್ಥೆ ಸುಧಾರಿಸುವುದು ಯಾವಾಗ? ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದರು.
ನಗರದಲ್ಲಿ ಭಾನುವಾರ ಜೆ.ಎಚ್.ಪಟೇಲ್ ಪ್ರತಿಷ್ಠಾನದಿಂದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ‘ವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮ ಪಾತ್ರ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಚುನಾವಣೆಯಲ್ಲಿ ಗೆದ್ದ ವ್ಯಕ್ತಿಗೆ ಅಭಿಪ್ರಾಯ ವ್ಯಕ್ತಪಡಿಸಲು ಆಗುತ್ತಿಲ್ಲ. ಸತ್ಯ ಹೇಳಿದ್ದಕ್ಕೆ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸಲಾಯಿತು. ವೈಯಕ್ತಿಕ ಅಭಿಪ್ರಾಯವನ್ನು ಪಕ್ಷ ವಿರೋಧಿ ಎಂದರೆ ಹೇಗೆ? ಸತ್ಯ ಹೇಳಿದರೂ ಕಷ್ಟ ಎಂದರೆ ಒಬ್ಬ ನಾಯಕನ ಗತಿ ಏನಾಗಬೇಡ? ನಮ್ಮ ವರ್ಚಸ್ಸು, ಜನಾಭಿಪ್ರಾಯ, ಸಾಮರ್ಥ್ಯಕ್ಕೆ ಮನ್ನಣೆ ಇಲ್ಲ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಏನು ಅರ್ಥವಿದೆ. ಈ ಬಗ್ಗೆ ಕೂಲಂಕಷವಾಗಿ ಯೋಚಿಸಬೇಕು ಎಂದರು.
ಚುನಾವಣೆಗೂ ಮುನ್ನ ಸರ್ಕಾರದ ಹಣಕಾಸಿನ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ವೈಯಕ್ತಿಕ ಯೋಜನೆ ಘೋಷಿಸುವುದಕ್ಕೆ ಕಡಿವಾಣ ಹಾಕಿದರೆ ಚುನಾವಣೆ ವ್ಯವಸ್ಥೆ ಸುಧಾರಣೆಯಾಗಲಿದೆ. ರಾಜ್ಯದ ಬಜೆಟ್ ನಲ್ಲಿ ಎಲ್ಲ ಖರ್ಚು– ವೆಚ್ಚ ಕಳೆದು ಅಭಿವೃದ್ಧಿಗೆ ಉಳಿಯುವುದು 80 ಸಾವಿರ ಕೋಟಿ. ಅದರಲ್ಲಿ ಮತದಾರರನ್ನು ಆಕರ್ಷಿಸಲು ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ಕೊಟ್ಟರೆ ರಾಜ್ಯ ಏನಾಗಬೇಕು? ಎಂದೂ ಪ್ರಶ್ನಿಸಿದರು.
ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಪ್ರಸ್ತುತ ಚುನಾವಣೆ ವ್ಯವಸ್ಥೆಯಲ್ಲಿ ಗೆದ್ದವರು ಫಲಾನುಭವಿಯಾದರೆ, ಮತದಾರರು ಬಲಿಪಶು ಎಂಬಂತಾಗಿದೆ. ಜನ ಜಾಗೃತಿಗಿಂತ, ಕಾನೂನಿನ ಮೂಲಕ ಸುಧಾರಣೆ ತರಬೇಕು. ಆಗ ಮಾತ್ರ ಪ್ರಾಮಾಣಿಕರ ಗೆಲುವು ಸಾಧ್ಯ. ಟಿಕೆಟ್ ಹಂಚಿಕೆಯಲ್ಲಿ ಜಾತಿ, ಹಣ ಬಲ, ಗೆಲುವು ಮಾನದಂಡವಾದರೆ ಪ್ರಜಾಪ್ರಭುತ್ವವನ್ನು ಅಣಕಿಸಿದಂತೆ ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯೆ ಬಲೀಷ್ ಬಾನು, ಮಾಜಿ ಶಾಸಕ ಎಂ.ಪಿ.ನಾಡಗೌಡ, ಜೆ.ಎಚ್.ಪಟೇಲ್ ಪ್ರತಿಷ್ಠಾನದ ವ್ಯವಸ್ಥಾಪಕ, ಜೆಡಿಯು ರಾಜ್ಯ ಅಧ್ಯಕ್ಷ ಮಹಿಮಾ ಜೆ.ಎಚ್.ಪಟೇಲ್, ಪ್ರತಿಷ್ಠಾನದ ಧರ್ಮದರ್ಶಿ ಮಹಿಮಾ ಜೆ.ಎಚ್.ಪಟೇಲ್, ಪ್ರತಿಷ್ಠಾನದ ಅಧ್ಯಕ್ಷ ತ್ರಿಶೂಲಪಾಣಿ ಜೆ.ಎಚ್.ಪಟೇಲ್, ಧರ್ಮದರ್ಶಿ ಟಿ.ಪ್ರಭಾಕರ್ ಇತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC