ಅಕ್ರಮ ಗೋಮಾಂಸ ವಹಿವಾಟಿನ ವಿರುದ್ಧದ ಕಾರ್ಯಾಚರಣೆಗಿಳಿದ ಮಧ್ಯಪ್ರದೇಶ ಸರ್ಕಾರ ಆದಿವಾಸಿಗಳೇ ಅಧಿಕ ಸಂಖ್ಯೆಯಲ್ಲಿರುವ ಮಾಂಡ್ಲಾ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿಕೊಂಡಿದ್ದ 11 ಮಂದಿಯ ಮನೆಗಳನ್ನು ಧ್ವಂಸಗೊಳಿಸಿದೆ.
ನಿಯಾನ್ ಪುರದ ಭೈನ್ವಾಹಿ ಪ್ರದೇಶದಲ್ಲಿ ಕಸಾಯಿಗಾಗಿ ದೊಡ್ಡಸಂಖ್ಯೆಯ ಗೋವುಗಳನ್ನು ಹಿಡಿದಿಡಲಾಗಿದೆ ಎಂಬ ಮಾಹಿತಿಯ ಆಧಾರದಲ್ಲಿ ಕ್ರಮ ಕೈಗೊಂಡ ಅಧಿಕಾರಿಗಳು ಗೋಮಾಂಸ ವ್ಯಾಪಾರ ಮತ್ತು ವಹಿವಾಟು ನಡೆಸುತ್ತಿದ್ದವರ ಮತ್ತು ಅಕ್ರಮವಾಗಿ ನಿರ್ಮಿಸಿದ್ದ 11 ಮನೆಗಳನ್ನು ದ್ವಂಸಗೊಳಿಸಿದ್ದಾರೆ. “ಅಧಿಕಾರಿಗಳ ತಂಡ ಆ ಪ್ರದೇಶಕ್ಕೆ ಧಾವಿಸಿದಾಗ 150 ಹಸುಗಳನ್ನು ಆರೋಪಿಗಳ ಮನೆಯ ಹಿಂದೆ ಕಟ್ಟಿಹಾಕಿಕೊಂಡಿರುವುದು ಕಂಡುಬಂದಿದೆ.
ಎಲ್ಲ 11 ಆರೋಪಿಗಳ ಮನೆಗಳ ಫ್ರಿಡ್ಜ್ ಗಳಲ್ಲಿ ಗೋಮಾಂಸ ಸಂಗ್ರಹಿಸಿದ್ದುದನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಣಿಯ ಕೊಬ್ಬು, ಜಾನುವಾರುಗಳ ಚರ್ಮ ಮತ್ತು ಎಲುಬು ಕೂಡಾ ಕೊಠಡಿಯೊಂದರಲ್ಲಿ ಪತ್ತೆಯಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಶಪಡಿಸಿಕೊಂಡ ಮಾಂಸ ಗೋಮಾಂಸ ಎನ್ನುವುದನ್ನು ಸ್ಥಳೀಯ ಸಂಸ್ಥೆಯ ಪಶುತಜ್ಞರು ದೃಢಪಡಿಸಿದ್ದಾರೆ. ಎಲ್ಲ 11 ಆರೋಪಿಗಳು ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಇದ್ದುದು ಕಂಡು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಮಾಂಸ ವಶಪಡಿಸಿಕೊಂಡ ಬಳಿಕ ಶುಕ್ರವಾರ ರಾತ್ರಿ ಎಫ್ ಐಆರ್ ದಾಖಲಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇತರ 10 ಮಂದಿಗಾಗಿ ಹುಡುಕಾಟ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA