ಬೆಂಗಳೂರು ನಗರದ ಎಚ್ ಎಎಲ್ ಬಳಿಯ ವಾಯುಸೇನೆ ಜಾಗಕ್ಕೆ ಪಾನಮತ್ತನಾಗಿ ಅಕ್ರಮವಾಗಿ ಪ್ರವೇಶಿಸಿದ್ದ ರಾಜ್ ಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ರಾಜ್ ಕುಮಾರ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ವಾಯುಸೇನೆ ಜಾಗದಲ್ಲಿ ಸುತ್ತಾಡುತ್ತಿದ್ದ ಈತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಠಾಣೆಗೆ ಒಪ್ಪಿಸಿದ್ದಾರೆ. ‘ಅಕ್ರಮ ಪ್ರವೇಶ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ನೀಲಿ ಬಣ್ಣದ ಕುರ್ತಾ ಧರಿಸಿದ್ದ ರಾಜ್ ಕುಮಾರ್, ಪಾನಮತ್ತನಾಗಿ ವಾಯುಸೇನೆಯ ತಾಂತ್ರಿಕ ವಿಭಾಗದ ಜಾಗದೊಳಗೆ ಹೋಗಿದ್ದ. ಆತನನ್ನು ನೋಡಿದ್ದ ಭದ್ರತಾ ಸಿಬ್ಬಂದಿ, ಸುತ್ತುವರೆದು ಹಿಡಿದಿದ್ದರು. ಆರೋಪಿಯನ್ನು ವಿಚಾರಣೆ ಮಾಡಲಾಗಿದೆ. ಈತನ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿಲ್ಲ’ ಎಂದು ತಿಳಿಸಿವೆ.


