ತುಮಕೂರು: ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೂಟಿಂಗ್ ರೇಂಜ್, ಟೆನಿಸ್, ಬ್ಯಾಸ್ಕೆಟ್ ಬಾಲ್ ಅಂಕಣಗಳು ಹಾಗೂ ಅಮಾನಿಕೆರೆಯಲ್ಲಿ ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ಜಲಕ್ರೀಡಾ ಕೇಂದ್ರಗಳನ್ನು ಭಾನುವಾರ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಲೋಕಾರ್ಪಣೆಗೊಳಿಸಿದರು.
ಜಿಲ್ಲಾಡಳಿತ, ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತುಮಕೂರು ಮಹಾನಗರ ಪಾಲಿಕೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಈ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು ಜಿಲ್ಲೆಯ ಕ್ರೀಡಾಪಟುಗಳು ಇದರ ಸದುಪಯೋಗ ಮಾಡಿಕೊಳ್ಳುವಂತೆ ಶುಭ ಹಾರೈಸಿದರು.
ಕಾರ್ಯಕ್ರಮದ ನಡುವೆ ಅಪಘಾತದಲ್ಲಿ ಮೂವರು ಪೊಲೀಸ್ ಸಿಬ್ಬಂದಿಗಳು ಮೃತಪಟ್ಟ ಸುದ್ದಿ ತಿಳಿದ ಗೃಹ ಸಚಿವರು ಯಾವುದೇ ವೇದಿಕೆ ಭಾಷಣ ಮಾಡದೆ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿವಿಧ ವಸತಿಗೃಹಗಳ ಶಂಕುಸ್ಥಾಪನೆ, ನಿವೃತ್ತ ಪೊಲೀಸರಿಗೆ ಜಮೀನು ಹಸ್ತಾಂತರ ಮೊದಲಾದ ಅಭಿವೃದ್ಧಿ ಕಾಮಗಾರಿಗಳನ್ನು ಮುಂದೂಡಿ ಘಟನಾ ಸ್ಥಳದ ಪರಿಶೀಲನೆಗೆ ತೆರಳಿದರು.
ಅಮಾನಿಕೆರೆಯಲ್ಲಿ ಜಲಕ್ರೀಡೆ:
ಅಮಾನಿಕೆರೆಯಷ್ಟು ವಿಶಾಲವಾದ ಸುಂದರ ಕೆರೆ ಎಲ್ಲ ಜಿಲ್ಲೆಗಳಲ್ಲಿ ಇಲ್ಲ. ಇರುವ ಅವಕಾಶಗಳನ್ನು ಇಲ್ಲಿ ಬಳಸಿಕೊಂಡು ಜಲಕ್ರೀಡಾ ಸ್ಪರ್ಧಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ತರಬೇತಿ ಕೇಂದ್ರ ಆರಂಭಿಸಲಾಗಿದೆ ಅಂತಾ ಸಚಿವರು ತಿಳಿಸಿದರು.
ಜನಸಂಪರ್ಕ ಸಭೆ:
ತುಮಕೂರು ಜಿಲ್ಲಾದ್ಯಂತ ವಿವಿಧ ತಾಲೂಕುಗಳಲ್ಲಿ ನಡೆಯುತ್ತಿರುವ ಜನಸಂಪರ್ಕ ಸಭೆ ಯಶಸ್ವಿಯಾಗುತ್ತಿದೆ. ಗುಬ್ಬಿ, ಶಿರಾ, ಕೊರಟಗೆರೆ ತಾಲೂಕುಗಳಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಆಧಾರ್ ಅದಾಲತ್ ರೀತಿಯಲ್ಲಿ ನಿರಂತರವಾಗಿ ಹಮ್ಮಿಕೊಳ್ಳುವ ಚಿಂತನೆ ಇದೆ ಎಂದು ತಿಳಿಸಿದರು.
ಮತ್ತೊಂದು ಕ್ರೀಡಾ ಹಾಸ್ಟೆಲ್‌ಗೆ ಚಿಂತನೆ:
ಬೇಸಿಗೆ ರಜೆಗಳನ್ನು ವ್ಯರ್ಥವಾಗಿ ಕಳೆಯದೆ ನಮ್ಮ ಜಿಲ್ಲೆಯ ಮಕ್ಕಳು ಅರ್ಥಪೂರ್ಣವಾಗಿ ಕಳೆಯಬೇಕು. ಪೋಷಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ತುಮಕೂರು ಇತ್ತೀಚಿನ ದಿನಗಳಲ್ಲಿ ಕ್ರೀಡಾ ಹಬ್ ಆಗಿದೆ. ಈಗಾಗಲೇ ಜಿಲ್ಲಾ ಕ್ರೀಡಾ ಹಾಸ್ಟೆಲ್ ಇದ್ದು ಮತ್ತೊಂದು ಕ್ರೀಡಾ ಹಾಸ್ಟೆಲ್ ಸ್ಥಾಪನೆಗೆ ಚಿಂತನೆ ಇದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಬಿಎಂಟಿಸಿ ನಿಗಮದ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್, ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶೋಭಾ ಸಿ., ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಉಮೇಶ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


