ಭೋಪಾಲ್: ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ನಗರದಲ್ಲಿ ಸುಮಾರು 40 ಮಂದಿಗೆ ಬೀದಿ ನಾಯಿಗಳು ಕಚ್ಚಿವೆ. ಮಂಗಳವಾರ ಸಂಜೆ ವೇಳೆಗೆ ಬೀದಿನಾಯಿಗಳಿಂದ ಕಚ್ಚಿಸಿಕೊಂಡ 40ಕ್ಕೂ ಹೆಚ್ಚು ವ್ಯಕ್ತಿಗಳು ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದರು.
ಜನವರಿ 10 ರಂದು ಭೋಪಾಲ್ನಲ್ಲಿ ಏಳು ತಿಂಗಳ ಮಗುವನ್ನು ಬೀದಿ ನಾಯಿಗಳು ಕೊಂದು ಹಾಕಿದ್ದವು. ಅಂದಿನಿಂದ ಮುನ್ಸಿಪಲ್ ಕಾರ್ಪೊರೇಷನ್ ಬೀದಿ ನಾಯಿಗಳನ್ನು ಹಿಡಿಯುವ ಅಭಿಯಾನವನ್ನು ಪ್ರಾರಂಭಿಸಿದೆ. ಮೇಯರ್ ಮಾಲ್ತಿ ರೈ ಅವರು ಪಾಲಿಕೆ ಅಧಿಕಾರಿಗಳ ಸಭೆಯನ್ನು ಕರೆದರು. ಪಾಲಿಕೆ ಆಯುಕ್ತ ನೋಬಲ್ ಫ್ರಾಂಕ್ ಸಹ ಹಾಜರಿದ್ದರು.
ಆದಷ್ಟು ಬೇಗ ಬೀದಿ ನಾಯಿಗಳನ್ನು ಹಿಡಿಯುವಂತೆ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು. ಸಾಕುಪ್ರಾಣಿಗಳ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ಮನೆಯಲ್ಲಿ ಅಥವಾ ಗೂಡಿನಲ್ಲಿ ಬಂಧಿಸುವಂತೆ ಅವರು ಒತ್ತಾಯಿಸಿದ್ದಾರೆ. ಮಹಾನಗರ ಪಾಲಿಕೆಯ ಕಾಮಗಾರಿಗೆ ಅಡ್ಡಿಪಡಿಸಿದರೆ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗುವುದು ಎಂದಿದ್ದಾರೆ.


