ಮುಂಬೈ: INDIA ಮೈತ್ರಿಕೂಟಗಳು ದ್ವೇಷದ ರಾಜಕೀಯವನ್ನು ಎದುರಿಸಲು ಸನ್ನದ್ಧವಾಗಿರಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.
ಮುಂಬೈಯಲ್ಲಿಂದು ಪ್ರತಿಪಕ್ಷಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳ ಮೈತ್ರಿಕೂಟದ ಬಲವು ಸರ್ಕಾರವನ್ನು ನಿರುತ್ಸಾಹಗೊಳಿಸುತ್ತಿದೆ. ಕೇಂದ್ರ ಸರ್ಕಾರದ ಅಡಿ ಬರುವ ಸಂಸ್ಥೆಗಳ ಹೆಚ್ಚು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯಿರುವುದರಿಂದ ಮೈತ್ರಿ ಕೂಟಗಳು ದ್ವೇಷದ ರಾಜಕೀಯವನ್ನು ಎದುರಿಸಲು ಸನ್ನದ್ಧವಾಗಿರಬೇಕು ಎಂದು ಅವರು ಹೇಳಿದ್ದಾರೆ.
ಕಳೆದ ಒಂಬತ್ತು ವರ್ಷಗಳಿಂದ ಬಿಜೆಪಿ ಮತ್ತು ಆರ್ಎಸ್ಎಸ್ ಹರಡಿದ ಕೋಮುವಾದದ ವಿಷವು ಈಗ ಅಮಾಯಕ ರೈಲು ಪ್ರಯಾಣಿಕರ ಮೇಲೆ ಮತ್ತು ಶಾಲಾ ಮಕ್ಕಳ ಮೇಲಿನ ದ್ವೇಷದ ಅಪರಾಧಗಳಲ್ಲಿ ಕಂಡುಬರುತ್ತಿವೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರೈಲ್ವೇ ಪೊಲೀಸ್ ಪೇದೆಯೊಬ್ಬರು ರೈಲಿನಲ್ಲಿದ್ದ ಜನರನ್ನು ಮಾರಣಾಂತಿಕವಾಗಿ ಗುಂಡಿಕ್ಕಿ ಹತ್ಯೆಗೈದ ಘಟನೆಗಳು ಮತ್ತು ಮುಜಫರ್ನಗರದ ಶಾಲೆಯ ಶಿಕ್ಷಕರೊಬ್ಬರು ತಮ್ಮ ಮನೆಕೆಲಸವನ್ನು ಪೂರ್ಣಗೊಳಿಸದಿದ್ದಕ್ಕಾಗಿ ಮುಸ್ಲಿಂ ಸಹಪಾಠಿಯನ್ನು ಕಪಾಳಮೋಕ್ಷ ಮಾಡುವಂತೆ ವಿದ್ಯಾರ್ಥಿಗಳಿಗೆ ಹೇಳಿದ್ದು ಇಂಥಹ ಘಟನೆಗಳು ಕೋಮುವಾದ ವಿಷಬೀಜ ಬಿತ್ತುವುದಕ್ಕೆ ಸಾಕ್ಷಿಯಾಗಿದೆ ಎಂದರು.


