ತುಮಕೂರು: ಪ್ರಪಂಚದ ಗಮನ ಸೆಳೆಯುವ ಮಟ್ಟಿಗೆ ಭಾರತ ಬದಲಾಗಿದ್ದು, ಶಿಕ್ಷಣ ಮತ್ತು ಯುವಕರ ಪಾತ್ರ ಹೆಚ್ಚಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ನಗರದ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಪಡೆದ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ 96 ಕೋಟಿ ಜನ ಇಂಟರ್ ನೆಟ್ ಬಳಸುತ್ತಿದ್ದಾರೆ. ಬೇರೆ ಯಾವ ದೇಶಗಳ ಜನರು ಇಷ್ಟೊಂದು ಇಂಟರ್ ನೆಟ್ ಬಳಸುತ್ತಿರುವ ಉದಾಹರಣೆಗಳಿಲ್ಲ. ಶಿಕ್ಷಣ ಸಾಕಷ್ಟು ಬದಲಾವಣೆ ತಂದಿದೆ. ಕರ್ನಾಟಕವು ಶೇ.75ರಷ್ಟು ಸಾಕ್ಷರತೆ ಪ್ರಮಾಣ ಹೊಂದಿದೆ. ಭಾರತ ಹೊರತುಪಡಿಸಿದರೆ ವೈದ್ಯರು, ಇಂಜಿನಿಯರ್ ಗಳ ಉತ್ಪಾದನೆಯಾವ ದೇಶದಲ್ಲಿಯೂ ಆಗುತ್ತಿಲ್ಲ. ಶಿಕ್ಷಣದಿಂದ ಇಷ್ಟೆಲ್ಲ ಬದಲಾವಣೆ ಸಾಧ್ಯವಾಗಿದೆ ಎಂದರು.
ಪ್ರತಿಭಾ ಪುರಸ್ಕೃತರು ಶೇ. 90ರಷ್ಟು ಅಂಕ ಪಡೆದುಕೊಂಡಿದ್ದಾರೆ. ಕೆಲವು ವಿಷಯಗಳಲ್ಲಿ ಶೇ.100ರಷ್ಟು ಅಂಕ ಪಡೆದುಕೊಂಡಿದ್ದಾರೆ. ಸ್ಪರ್ಧಾತ್ಮಕ ಯುಗ ನಿಮ್ಮ ಮುಂದೆ ನಿಂತಿದೆ ಎಂಬುದಕ್ಕೆ ಉದಾಹರಣೆ. ಇದಕ್ಕೆ ಭಾರತ ನಿಮ್ಮನ್ನು ಕಾಯುತ್ತಿದೆ. ನಿಮ್ಮ ಭವಿಷ್ಯ ಕಾಯುತ್ತಿದೆ. ಭಾರತವನ್ನು ನೀವು ಕಟ್ಟಬೇಕು ಎಂಬುದನ್ನು ನೆನಪಿಸಲು ಪುರಸ್ಕಾರಗಳಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು.
ತುಮಕೂರಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಮಾಣ ಸುಧಾರಿಸಿದೆ. ಇದು ಸಾಲದು. ಮಕ್ಕಳ ಕಲಿಕೆಗಾಗಿ ಶಿಕ್ಷಕರು ಮತ್ತಷ್ಟು ಹೆಚ್ಚಿನ ಒತ್ತು ನೀಡಬೇಕಿದೆ. ಬೆಂಗಳೂರಿಗೆ ಹತ್ತಿರದಲ್ಲಿರುವ ತುಮಕೂರು ಶೇ.70ರಷ್ಟು ತೆಗೆದುಕೊಳ್ಳಬೇಕೇ ಎಂದು ಪ್ರಶ್ನಿಸಿದರು.
ವಿ.ಸೋಮಣ್ಣ ಅವರು ಸಂಸದರಾದ ಬಳಿಕ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದಾರೆ. ನಮ್ಮ ಸಂಸದರು ಈ ರೀತಿಯಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
8ನೇ ಹಣಕಾಸಿನ ಆಯೋಗದ ವರದಿ ಒಪ್ಪಿದರೆ ಶೇ. 25ರಷ್ಟು ಸಂಬಳ ಹೆಚ್ಚಾಗುತ್ತದೆ. ಪ್ರಸಕ್ತ ಸಾಲಿನಲ್ಲಿ 4.9 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಲಾಗಿದೆ. ನಮ್ಮ ಅಭಿವೃದ್ಧಿಗೆ 1.50 ಲಕ್ಷ ಕೋಟಿ ರೂ. ಸಿಗುತ್ತಿದೆ. ಒಪಿಎಸ್ ಮರು ಜಾರಿಗೊಳಿಸುವ ಭರವಸೆಯನ್ನು ಪ್ರಣಾಳಿಕೆಗೆ ರಾತ್ರಿ 2 ಗಂಟೆಯಲ್ಲಿ ನಾನೇ ಸೇರಿಸಿದೆ. ಇದನ್ನು ಮಾಡುತ್ತೇವೆ ಎಂಬುದಾಗಿ ಸಿಎಂ ಅವರು ಭರವಸೆ ನೀಡಿದ್ದು, ಸಮಿತಿ ರಚಿಸಿದ್ದಾರೆ ಎಂದು ಹೇಳಿದರು.
ತುಮಕೂರಿನ ಅಭಿವೃದ್ಧಿ ವೇಗವಾಗಿ ಆಗಬೇಕು. ತುಮಕೂರಿಗೆ ಮೆಟ್ರೋ ತರಬೇಕು ಎಂದು ಕಳೆದ ಹತ್ತು ವರ್ಷದಿಂದ ಹೇಳಲಾಗುತ್ತಿದೆ. ಇದಕ್ಕೆ ಈಗ ವೇಗ ಸಿಕ್ಕಿದೆ. ಸೋಮಣ್ಣ ಅವರು ಸಹ ನನ್ನ ಜೊತೆ ಮೆಟ್ರೋ ಯೋಜನೆ ಆಗಬೇಕು ಎಂದಿದ್ದಾರೆ.
ತುಮಕೂರಿನಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ಆಗಿದೆ. ಜಪನೀಸ್ ಟೌನ್ ಶಿಪ್ ಬರುತ್ತಿದೆ. 150ಕ್ಕು ಹೆಚ್ಚು ಕೈಗಾರಿಕೆ, ಹೆಚ್‌ಎಎಲ್ ಹೆಲಿಕ್ಯಾಪ್ಟರ್ ಫ್ಯಾಕ್ಟರಿ ಆರಂಭವಾಗಿದೆ. 650 ಎಕರೆ ಬೇಕು ಎಂಬ ಪ್ರಸ್ತಾವನೆ ಬಂದಿದ್ದು, ಭೂಮಿ ಗುರುತಿಸಲಾಗುತ್ತಿದೆ. ಏಳು ಇಂಜಿನಿಯರಿಂಗ್ ಕಾಲೇಜುಗಳಿವೆ. ಇವರಿಗೆಲ್ಲ ಉದ್ಯೋಗ ಸಿಗವಂತಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ವಿ.ಸೋಮಣ್ಣ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಂಸದ ಜಿ.ಎಸ್.ಬಸವರಾಜ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ಅವರು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC