ಮೈಸೂರು: ಭಾರತ ರಾಮಾಯಣ, ಮಹಾಭಾರತದ ಸನ್ನಿವೇಶಗಳನ್ನು ವಿಶಿಷ್ಟ ಕಥೆಗಳಾಗಿ ನೀಡುವ ಮೂಲಕ ಜಗತ್ತಿನಲ್ಲಿ ಕಥೆಗಳ ಆಗರವೆನಿಸಿದೆ. ಭಾರತದಲ್ಲಿ ನಿರ್ಮಿತ ಸಿನೆಮಾಗಳು ಕೂಡ ಜಾಗತಿಕ ಮಟ್ಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ಅವರು ಹೇಳಿದರು.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎರಡು ದಿನಗಳ ಕಾಲ ನಡೆದ ಮೂರನೇ ‘ಪರಿದೃಶ್ಯ’ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತವನ್ನು ಜಾಗತಿಕ ಮಟ್ಟದ ಸೃಜನಾತ್ಮಕ ಆರ್ಥಿಕತೆಯಾಗಿ ಮಾಡಲು ಆಡಿಯೋ ವಿಶ್ಯುವಲ್ ಎಂಟರ್ ಟೈನ್ಮೆಂಟ್ ಸಮ್ಮಿಟ್ ಅನ್ನು 2019 ರಲ್ಲಿ ಘೋಷಣೆ ಮಾಡಿದ್ದು ಈ ವರ್ಷ ಅದು ನಡೆಯಲಿದೆ. ಎಲ್ಲಾ ರೀತಿಯ ಮಾಧ್ಯಮಗಳಿಗೂ ಇದು ಪೂರಕವಾದದ್ದು. ಪಾರಂಪರಿಕ ಮಾಧ್ಯಮ, ಟಿವಿ ಮಾಧ್ಯಮ, ಗೇಮಿಂಗ್, ಸಾಮಾಜಿಕ ಜಾಲತಾಣ ಕ್ಷೇತ್ರಕ್ಕೆ ಪ್ರೋತ್ಸಾಹದಾಯಕವಾಗಿದೆ. ಯಂಗ್ ಫಿಲ್ಮ್ ಮೇಕರ್ಸ್ ಚಾಲೆಂಜ್ ಎಂಬುದು ಕೂಡ ಇದರ ಒಂದು ಭಾಗ. ಇದರ ಅಡಿಯಲ್ಲಿ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಗೋವಾದಲ್ಲಿ 100 ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಸ್ತುತ ಹಾಲಿವುಡ್ ಸಿನೆಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಮಾಡಲು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ವ್ಯವಸ್ಥೆ ರೂಪಿಸಲಾಗಿದೆ ಎಂದು ನುಡಿದರು.
ದೆಹಲಿಯಲ್ಲಿ ಆಯೋಜನೆಗೊಂಡಿರುವ ವಿಶ್ವ ಆಡಿಯೊ ವಿಷುವಲ್ ಎಂಟರ್ಟೈನ್ಮೆಂಟ್ ಶೃಂಗಸಭೆಯಲ್ಲಿ (ವೇವ್ಸ್ ) ಮನರಂಜನೆ ಕ್ಷೇತ್ರದ ಎಲ್ಲ ಪ್ರಮುಖರು ಭಾಗವಹಿಸಲಿದ್ದು, ದೇಶದ ಯುವ ಜನತೆ ಇದರ ಲಾಭ ಪಡೆಯಬೇಕು’ ಎಂದು ಸಚಿವರು ತಿಳಿಸಿದರು. ದೇಶದ ಮನರಂಜನಾ ಕ್ಷೇತ್ರವೂ ಪ್ರತಿ ವರ್ಷ ಶೇ 9.7ರಷ್ಟು ಅಭಿವೃದ್ಧಿ ಹೊಂದುತ್ತಿದ್ದು, 2027ರೊಳಗೆ ₹469 ದಶಲಕ್ಷ ಕೋಟಿಯ ಉದ್ಯಮವಾಗಿ ಬೆಳೆಯಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನೇತೃತ್ವದಿಂದ ಈ ಶೃಂಗಸಭೆ ಭಾರತದಲ್ಲಿ ಆಯೋಜನೆಗೊಂಡಿದೆ. ಇಂದು ದೇಶದಲ್ಲಿ ಚಲನಚಿತ್ರ ನಿರ್ಮಾಣ ಪೂರ್ವ ಮತ್ತು ನಂತರದ ಕಾರ್ಯಗಳಿಗೆ ಅಗತ್ಯ ಮೂಲಸೌಭ್ಯ ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಮೂಲಕ ಚಲನಚಿತ್ರ ಸೌಲಭ್ಯ ಕಚೇರಿಯನ್ನು ತೆರೆಯಲಾಗಿದ್ದು, ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಲು ಏಕ ಗವಾಕ್ಷಿ ವ್ಯವಸ್ಥೆ ಸ್ಥಾಪಿಸಿದ್ದೇವೆ. ತ್ವರಿತಗತಿಯಲ್ಲಿ ಅನುಮತಿ ನೀಡಲಾಗುತ್ತಿದೆ. ದೇಶದೊಳಗೆ ಚಿತ್ರೀಕರಣಕ್ಕೆ ಸಬ್ಸಿಡಿಯನ್ನೂ ಒದಗಿಸಿದ್ದೇವೆ ಎಂದರು.
‘ಮುಂಬೈನಲ್ಲಿ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್(ಎವಿಜಿಸಿ) ವಿಭಾಗದಲ್ಲಿ ರಾಷ್ಟ್ರೀಯ ಸ್ಕೂಲ್ ಆಫ್ ಎಕ್ಸಲೆನ್ಸಿ ಕೇಂದ್ರ ಆರಂಭಿಸಲು ಸರ್ಕಾರ ಮುಂದಾಗಿದ್ದು, ಐಐಟಿ, ಏಮ್ಸ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ ಎಂದರು.
2022ರಲ್ಲಿ ಪ್ರಾರಂಭವಾದ ಮೈಸೂರಿನ ಪರಿದೃಶ್ಯ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವ ಮೂರೇ ವರ್ಷದಲ್ಲಿ 3000ಕ್ಕೂ ಅಧಿಕ ಚಿತ್ರಗಳನ್ನು ಸ್ವೀಕರಿಸುವ ಮೂಲಕ ಒಂದು ಪ್ರಮುಖ ವೇದಿಕೆಯಾಗಿ ಬೆಳೆದಿದೆ. ಅವರ ಶ್ರಮಕ್ಕೆ, ಪ್ರಯತ್ನಕ್ಕೆ ಅಭಿನಂದನೆಗಳು ಎಂದು ನುಡಿದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ ಸುನೀಲ್ ಪುರಾಣಿಕ್ ಪರಿದೃಶ್ಯದಲ್ಲಿ ಉತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆದ ಚಿತ್ರ ಇಂದು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದೆ. ಸಾಕ್ಷ್ಯಚಿತ್ರ, ಕಿರುಚಿತ್ರದ ಮೂಲಕ, ಸಿನೆಮಾ ಕ್ಷೇತ್ರಕ್ಕೆ ಬರಬೇಕೆನ್ನುವ ಪ್ರತಿಭೆಗಳಿಗೆ ಪರಿದೃಶ್ಯ ಉತ್ತಮ ವೇದಿಕೆ. ಬೆಂಗಳೂರಲ್ಲಿ ಪ್ರಾರಂಭವಾದ ಪರಿದೃಶ್ಯ ಮುಂದಿನ ದಿನಗಳಲ್ಲಿ ಸಿನೆಮಾ ಕ್ಷೇತ್ರದ ಹಬ್ ಆಗಲಿರುವ ಮೈಸೂರಿಗೆ ಅದು ರವಾನೆಯಾಗಿದ್ದು ಅಭಿನಂದನಾರ್ಹ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಜಗನ್ನಾಥ ಶೆಣೈ, ಮೈಸೂರು ಸಿನೆಮಾ ಸೊಸೈಟಿಯ ಅಧ್ಯಕ್ಷ ಡಾ. ಚಂದ್ರಶೇಖರ ಸಿ ಆರ್, ಕಾರ್ಯದರ್ಶಿ ಪದ್ಮಾವತಿ ಎಸ್ ಭಟ್ ಉಪಸ್ಥಿತರಿದ್ದರು.
ಪರಿದೃಶ್ಯ ಚಿತ್ರೋತ್ಸವಕ್ಕೆ ಪ್ರಪಂಚದಾದ್ಯಂತ 109 ದೇಶಗಳಿಂದ 3123 ಕಿರು ಮತ್ತು ಸಾಕ್ಷ್ಯಚಿತ್ರಗಳು ಬಂದಿವೆ. ಈ ಚಿತ್ರಗಳಲ್ಲಿ ಆಯ್ಕೆಯಾದ ಸಿನಿಮಾಗಳಿಗೆ 26 ವರ್ಗಗಳ ಪ್ರಶಸ್ತಿಗಳನ್ನು ನೀಡಲಾಯಿತು. ಭಾರತದಿಂದ 985, ಇರಾನ್ ಇಂದ 413, ಸ್ಪೇನ್ ಇಂದ 138, ಫ್ರಾನ್ಸ್ 137, ಬ್ರೆಜಿಲ್ 108, ಚೀನಾ 99, ಇಂಡೋನೇಷಿಯಾ 91, ಟರ್ಕಿ 88, USA 82, ಇಟಲಿ 81 ಮುಂತಾದ ದೇಶಗಳಿಂದ 3123 ಸಿನಿಮಾಗಳು ಬಂದಿವೆ. ಕನ್ನಡದ ಒಟ್ಟು 73 ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳು ಸೇರಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4