ಉತ್ತರಾಖಂಡ: ಹರಿದ್ವಾರದ ಹರ್ ಕಿ ಪೌರಿಯಲ್ಲಿ ಮೂಢನಂಬಿಕೆಗೆ ಅಪ್ರಾಪ್ತ ಏಳು ವರ್ಷದ ಬಾಲಕ ಬಲಿಯಾದ ಘಟನೆ ನಡೆದಿದೆ. ಗಂಗಾ ನದಿಯಲ್ಲಿ ಮುಳುಗಿಸುವುದರಿಂದ ಮಗು ರಕ್ತದ ಕ್ಯಾನ್ಸರ್ ನಿಂದ ಗುಣಮುಖವಾಗಲಿದ್ದಾನೆ ಎಂದು ಪವಾಡದ ನಿರೀಕ್ಷೆಯಲ್ಲಿ ಆತನ ಚಿಕ್ಕಮ್ಮ ಸುಧಾ ಸುಮಾರು ಐದು ನಿಮಿಷಗಳ ಕಾಲ ಗಂಗಾ ನದಿಯಲ್ಲಿ ಮುಳುಗಿಸಿದ್ದಾರೆ.
ಅವರು ಮಗುವನ್ನು ಗಂಗಾ ನದಿಯಲ್ಲಿ ಮುಳುಗಿಸಿದಾಗ, ಸುತ್ತಮುತ್ತಲಿನ ಸ್ಥಳೀಯರಿಗೆ ಅನುಮಾನವಾಯಿತು. ಗಲಾಟೆ ಮಾಡಿ ಮಗುವನ್ನು ರಕ್ಷಿಸಲು ಯತ್ನಿಸಿದರು. ಆದರೆ, ಅಷ್ಟರಲ್ಲೇ ಮಗುವಿನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮಗುವಿನ ಶವದ ಎದುರು ಕುಳಿತ ಮಹಿಳೆಯೋರ್ವಳು ವಿಕಾರವಾಗಿ ನಗುತ್ತ, ಮಗು ಜೀವಂತವಾಗಿ ಬರುತ್ತದೆ ಎಂದು ಜನರಿಗೆ ಹೇಳುತ್ತಿರುವುದು ವಿಡಿಯೋದಲ್ಲಿದೆ. ಇವಳು ಮಾನಸಿಕ ಅಸ್ವಸ್ಥಳಿರಬಹುದು ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.


