ತುಮಕೂರು: ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ರೀತಿ, ಕರ್ನಾಟಕದಲ್ಲಿಯೂ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 250 ಅಡಿ ಎತ್ತರದ ಪ್ರತಿಮೆ ಸ್ಥಾಪಿಸುವ ಭರವಸೆಯನ್ನು ಸರಕಾರ 2025—26 ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಬೇಕು ಎಂದು ಕರ್ನಾಟಕ ಭೀಮ ಸೇನೆ(ರಿ),ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಸಿ. ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಸಂಬಂಧವಾಗಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರು, ಗೃಹ ಸಚಿವರು ಹಾಗೂ ಲೋಕೋಪಯೋಗಿ ಸಚಿವರುಗಳಲ್ಲಿ ಕಳೆದ 1ವರ್ಷದಿಂದ ಮನವಿ ಮಾಡುತ್ತಾ ಬಂದಿದ್ದು, ಬೇರೆ ಸಮುದಾಯದ ನಾಯಕರುಗಳ ಪ್ರತಿಮೆಗಳನ್ನು ನಗರದ ಪ್ರಮುಖ ಜಾಗಗಳಲ್ಲಿ ಸ್ಥಾಪಿಸಿರುವ ರೀತಿಯಲ್ಲಿಯೇ ಲಾಲ್‌ಭಾಗ್ ನಲ್ಲಿ ಅಂಬೇಡ್ಕರ್ ಅವರ 250 ಅಡಿ ಎತ್ತರದ ಪ್ರತಿಮೆ ಸ್ಥಾಪಿಸುವುದರ ಜೊತೆಗೆ, ಬಾಬಾ ಸಾಹೇಬರ ಕುರಿತು ಮ್ಯೂಸಿಯಂ ಸ್ಥಾಪಿಸಬೇಕೆಂಬುದು ಕರ್ನಾಟಕ ಭೀಮ ಸೇನೆಯ ಆಗ್ರಹವಾಗಿದೆ ಎಂದರು.
ತೆಲಂಗಾಣ ಸರಕಾರ 2023ರ ಏಪ್ರಿಲ್ 14 ರಂದು ಸುಮಾರು 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ಅಂದಿನ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ಪ್ರತಿಷ್ಠಾಪಿಸಿದರೆ, 2024ರ ಜನವರಿ 19 ರಂದು ಆಂಧ್ರ ಪ್ರದೇಶದ ಅಂದಿನ ಮುಖ್ಯಮಂತ್ರಿ ವೈ.ಎನ್.ಜಗಮೋಹನ್ ರೆಡ್ಡಿ ಅವರು ಸುಮಾರು 206 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಈ ಎರಡು ರಾಜ್ಯಗಳ ರೀತಿಯಲ್ಲಿಯೇ ಕರ್ನಾಟಕವೂ ಕೂಡ ಬಾಬಾ ಸಾಹೇಬರ 250 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಬೇಕೆಂಬುದು ಕೆ.ಬಿ.ಎಸ್ ನ ಹೋರಾಟವಾಗಿದೆ. ನಮ್ಮ ಮನವಿಗೆ ಸಚಿವರುಗಳು, ಶಾಸಕರುಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜಗದೀಶ್ ಸಿ. ತಿಳಿಸಿದರು.
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಏಕ ಕಾಲಕ್ಕೆ ಕರ್ನಾಟಕ ಭೀಮ ಸೇನೆ ಈ ಹೋರಾಟವನ್ನು ಕೈಗೆತ್ತಿಕೊಂಡಿದೆ. ಇಂದಿನ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ನಾವು ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ ಕಾರಿಡಾರ್ ನ ಒಂದು ಭಾಗದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಒತ್ತಾಯಿಸಿದ್ದೆವು. ಆದರೆ ಸರಕಾರದ ಮುಖ್ಯ ಕಾರ್ಯದರ್ಶಿಯವರು ಬೆಂಗಳೂರಿನ ಹೃದಯ ಭಾಗದಲ್ಲಿರುವ ಲಾಲ್ ಬಾಗ್ ನಲ್ಲಿ ಸುಮಾರು 240 ಎಕರೆ ಜಾಗವಿದ್ದು, ಸದರಿ ಜಾಗದಲ್ಲಿಯೇ ಬಾಬಾ ಸಾಹೇಬರ ಪ್ರತಿಮೆ ಸ್ಥಾಪಿಸುವ ಭರವಸೆಯನ್ನು ಕೆಬಿಎಸ್ ಗೆ ನೀಡಿದ್ದರು. ಕಾರ್ಯಾಂಗದ ಮುಖ್ಯಸ್ಥರು ಆಗಿರುವ ಸಿ.ಎಸ್.ಅವರು ನೀಡಿದ ಭರವಸೆಯಂತೆ ಲಾಲ್ ಬಾಗ್‌ನಲ್ಲಿಯೇ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಮುಂದಾಗಬೇಕು. ಇದನ್ನು 2025—26 ನೇ ಸಾಲಿನ ಬಜೆಟ್ ಭಾಷಣದಲ್ಲಿ ಬಹಿರಂಗ ಪಡಿಸಬೇಕೆಂಬುದು ನಮ್ಮ ಸಂಘಟನೆಯ ಒತ್ತಾಯವಾಗಿದೆ ಎಂದರು.
ಸರಕಾರಕ್ಕೆ ಹಣಕಾಸಿನ ಕೊರತೆಯಿಲ್ಲ. ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ ಯೋಜನೆಗಳಲ್ಲಿ ಸಾಕಷ್ಟು ಹಣವಿದೆ. ದಲಿತರ ಅಭಿವೃದ್ದಿಗೆ ಬಳಕೆಯಾಗಬೇಕಾಗಿದ್ದ ಹಣವನ್ನು ಗ್ಯಾರಂಟಿ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ನಿಯಮ ಮೀರಿ ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ಒಂದಷ್ಟು ಹಣವನ್ನು ಬಾಬಾ ಸಾಹೇಬರ ಪ್ರತಿಮೆಗೆ ಬಳಕೆ ಮಾಡಿಕೊಳ್ಳಲಿ ಎಂಬುದು ನಮ್ಮಗಳ ಒತ್ತಾಯ. ಗ್ಯಾರಂಟಿ ಯೋಜನೆಗಳು ಕೇವಲ ದಲಿತರಿಗೆ, ಹಿಂದುಳಿದ ವರ್ಗಗಳಿಗೆ, ಬಡವರಿಗೆ ಸಿಮೀತವಾಗಿಲ್ಲ. ಉಳ್ಳವರು ಸಹ ಇದರ ಲಾಭ ಪಡೆಯುತ್ತಿದ್ದಾರೆ. ಇದರಿಂದ ಎಸ್.ಸಿ.ಪಿ, ಟಿ.ಎಸ್.ಪಿಯ ಹಣ ಪೋಲಾಗುತ್ತಿದೆ. ಇದರ ಬದಲಾಗಿ ಪ್ರತಿಮೆಗಾದರೂ ಹಣ ವಿನಿಯೋಗಿಸಲಿ, ಜೊತೆಗೆ ದಲಿತ ಸಮುದಾಯದ ಮಕ್ಕಳು ವಿದ್ಯಾಬ್ಯಾಸಕ್ಕೆ ಹೆಚ್ಚಿನ ಹಾಸ್ಟಲ್, ವಸತಿ ಶಾಲೆಗಳನ್ನು ತೆರೆದು ಶಿಕ್ಷಣಕ್ಕೆ ಹೆಚ್ಚಿನ ವ್ಯಯ ಮಾಡಲಿ ಎಂಬುದು ಕರ್ನಾಟಕ ಭೀಮ ಸೇನೆಯ ಒತ್ತಾಯವಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಸಿ., ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾಧ್ಯಕ್ಷ ಮಹದೇವ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಯುವ ಘಟಕದ ಅಧ್ಯಕ್ಷ ರಂಜನ್, ಪದಾಧಿಕಾರಿಗಳಾದ ಮಣಿ ಪ್ರಶಾಂತ್, ನಂದನ್, ಮಹೇಶ್, ರಾಕೇಶ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4