ತಿಪಟೂರು: ಒಳಮೀಸಲಾತಿಯಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ತಾಲ್ಲೂಕು ಜೈಭೀಮ್ ಛಲವಾದಿ ಮಹಾಸಭಾ ಹಾಗೂ ಪ್ರಗತಿಪರ ಸಂಘಗಳ ಮಹಾ ಒಕ್ಕೂಟದಿಂದ ನಗರದ ಅಂಬೇಡ್ಕರ್ ವೃತ್ತದಿಂದ ತಾಲ್ಲೂಕು ಆಡಳಿತಸೌಧದವರೆಗೆ ಬೈಕ್ ರ್ಯಾಲಿ, ಪ್ರತಿಭಟನೆ ನಡೆಸಲಾಯಿತು.
ಛಲವಾದಿ ಮಹಾಸಭಾದ ಅಧ್ಯಕ್ಷ ಬಜಗೂರು ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಒಳ ಮೀಸಲಾತಿ ಕೆಲವರಿಗೆ ವಿಷವಾದರೆ, ಇನ್ನು ಕೆಲವರಿಗೆ ಹಾಲು ನೀಡಿದಂತಾಗಿದೆ. ಈ ಅಸಮಾನತೆ ಅಳಿಸಿ ಸಮಾನತೆ ನೀಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದಾದ್ಯಂತ ಒಳಮೀಸಲಾತಿಯಲ್ಲಿ ಎಡ ಮತ್ತು ಬಲ ವಿಭಾಗ ಮಾಡಿ ವಿಷ ಉಣಿಸಲಾಗುತ್ತಿದೆ. ಹಿಂದಿನ 15:3 ಅನುಪಾತದ ಮೀಸಲು ಚೆನ್ನಾಗಿತ್ತು ಎಂದರು.
ಗೌರವಾಧ್ಯಕ್ಷ ಬುರುಡೇಘಟ್ಟ ಪ್ರಭುಸ್ವಾಮಿ ಮಾತನಾಡಿ, ತಾಲ್ಲೂಕಿನ ಛಲವಾದಿ ಸಮುದಾಯಕ್ಕೆ ಒಳಮೀಸಲಾತಿಯಲ್ಲಿ ಅನ್ಯಾಯವಾಗಿದೆ. ನ್ಯಾಯ ಒದಗಿಸಬೇಕು. ಹಿಂದೆ ಇದ್ದ ಮೀಸಲಾತಿಯನ್ನೇ ಮತ್ತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಂಚಾಘಟ್ಟ ಮಧುಸೂಧನ್, ಸಿದ್ದೇಶ್ ಕರಡಾಳು, ಶಿವಲಿಂಗಮೂರ್ತಿ, ಶಿವಕುಮಾರ್, ರಘು, ವಸಂತ್, ಸುರೇಶ್, ಮೋಹನ್, ಚನ್ನರಾಜು ಮಹಾಲಿಂಗಪ್ಪ, ನರಸಿಂಹಮೂರ್ತಿ ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


