ತುಮಕೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರದಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಆಯೋಗ ನೀಡಿರುವ ವರದಿ ಅವೈಜ್ಞಾನಿಕ, ಅಪೂರ್ಣ ಹಾಗೂ ಪಕ್ಷಪಾತದಿಂದ ಕೂಡಿದೆ ಅದನ್ನು ತಿರಸ್ಕರಿಸಿ ಮರು ಸಮೀಕ್ಷೆ ನಡೆಸಬೇಕೆಂದು ಆಗ್ರಹಿಸಿ ಮಾ. 25 ರಂದು ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಡಿಸಿಎಂಎಸ್ ಜಿಲ್ಲಾ ಸಂಚಾಲಕ ಭಾನು ಪ್ರಕಾಶ್ ಸಿ. ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ. 12, 2026ರಂದು ಬೆಂಗಳೂರಿನ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಒಳಮೀಸಲಾತಿ ವಿಷಯವಾಗಿ ವಿಸ್ತೃತ ಚರ್ಚೆ ನಡೆಸಲಾಗಿದೆ. ಒಳಮೀಸಲಾತಿ ಕುರಿತಂತೆ ನ್ಯಾಯಾಲಯ ತಡೆಯಾಜ್ಞೆ ಇರುವುದರ ಜೊತೆಗೆ ರೋಸ್ಟರ್ ಬಿಂದುಗಳ ವಿಷಯದಲ್ಲಿ ಗೊಂದಲ ಉಂಟಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಕೇಂದ್ರ ಸರ್ಕಾರವು ಶೇಕಡಾ 50ರಷ್ಟು ಮೀಸಲಾತಿಗೆ ಒಪ್ಪಿಗೆ ನೀಡುವವರೆಗೂ ಒಳಮೀಸಲಾತಿ ರಹಿತವಾಗಿ ಶೇಕಡಾ 15+3ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿ ಫೆ. 27, 2026ರಂದು ಸರ್ಕಾರದ ಆದೇಶವನ್ನು ಹೊರಡಿಸಿದೆ. ಆದರೆ 101 ಜಾತಿಗಳ ಪೈಕಿ ಒಂದೇ ಜಾತಿಯ ಒತ್ತಡಕ್ಕೆ ಮಣಿದು ಸರ್ಕಾರವು ಶೇಕಡಾ 15+3ರ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಮುಂದಾದರೆ ರಾಜ್ಯ ಸರ್ಕಾರವು ಬಲಗೈ ಸಮುದಾಯಗಳ ತೀವ್ರ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಡಿಸಿಎಂಎಸ್‌ನ ಅಧ್ಯಕ್ಷ ಡಾ.ಚಂದ್ರಪ್ಪ ಮಾತನಾಡಿ, ಸರ್ಕಾರ ಅವೈಜ್ಞಾನಿಕ ಮತ್ತು ದೋಷಪೂರಿತವಾದ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಬೇಕು. ಒಬಿಸಿ ಆಯೋಗದ ಸಮೀಕ್ಷಾ ವರದಿಯನ್ನು ನ್ಯಾ.ನಾಗಮೋಹನ್ ದಾಸ್ ವರದಿಗೆ ತಾಳೆಹಾಕಿ, ವ್ಯತ್ಯಾಸ ಕಂಡು ಬಂದರೆ ಮತ್ತೊಮ್ಮೆ ಸಮೀಕ್ಷೆ ನಡೆಸಬೇಕು. ರಾಜ್ಯ ಸರ್ಕಾರವೂ 03-09-2025 ರಂದು ಯಾವುದೇ ಮಾನದಂಡವಿಲ್ಲದೆ ಹೊರಡಿಸಿರುವ ಮೀಸಲಾತಿ ಆದೇಶವನ್ನು ಹಿಂಪಡೆಯಬೇಕು. ಜಾತಿ ಪ್ರಮಾಣ ಪತ್ರ ಪ್ರಮಾಣ ಪತ್ರಗಳೊಂದಿಗೆ ಪರಿಗಣಿಸಲು ಸೂಕ್ತ ಆದೇಶ ಹೊರಡಿಸಬೇಕು. ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸೇರಿರುವ 63 ಜಾತಿಗಳನ್ನು ಒಂದು ಗುಂಪಿಗೆ ತಂದು ಉದ್ಯೋಗ, ಶಿಕ್ಷಣ ಇತರೆ ಸೌಲಭ್ಯ ಪಡೆಯಲು ಆದೇಶ ಹೊರಡಿಸಬೇಕು ಎಂದರು.
ಮುಖಂಡರಾದ ಶ್ರೀ ನಿವಾಸ್ ಮಾತನಾಡಿ, ಸರ್ಕಾರದ ಮೀಸಲಾತಿ ಇತ್ತೀಚಿನ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶಗಳಲ್ಲಿನ ರೋಸ್ಟರ್ ಬಿಂದುಗಳನ್ನು ಅವಲೋಕಿಸಿದರೆ ಬಲಗೈ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳಿಗೆ ಭಾರಿ ಅನ್ಯಾಯವಾಗಲಿದೆ. ನಾವು ಮೀಸಲಾತಿ ವಿರೋಧಿಗಳಲ್ಲ. ಆದರೆ ಇದೇ ರೋಸ್ಟರ್ ಬಿಂದು ಮುಂದುವರೆದರೆ ಪರಿಶಿಷ್ಟ ಜಾತಿಯಲ್ಲಿರುವ ಒಂದು ವರ್ಗವನ್ನು ಹೊರತು ಪಡಿಸಿ, ಉಳಿದ ವರ್ಗಗಳಿಗೆ ಉದ್ಯೋಗ, ಶಿಕ್ಷಣ, ಆರ್ಥಿಕ ಸವಲತ್ತುಗಳು ದೊರೆಯುವುದು ಮರೀಚಿಕೆ. ಹಾಗಾಗಿ ಇದರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ನಿವಾಸ್, ಛಲವಾದಿ ಶೇಖರ್, ಸಿದ್ದಲಿಂಗಯ್ಯ, ಭೈರೇಶ್, ಕೃಷ್ಣಪ್ಪ ಹೆಗ್ಗರೆ, ಗಿರೀಶ್ ಜಿ.ಆರ್, ಅಪ್ಪಾಜಯ್ಯ, ಇಂದ್ರಕುಮಾರ್, ವಕೀಲ ನಾಗೇಶ್, ಗಂಗಾಂಜನೇಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


