ದುಬೈ/ಬೆಂಗಳೂರು: ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ, ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನೆಲೆಸಿರುವ ಕನ್ನಡಿಗರ ಸುರಕ್ಷತೆಗಾಗಿ ಮತ್ತು ಅವರ ಕುಟುಂಬಗಳಿಗೆ ಮಾಹಿತಿ ನೀಡಲು ವಿಶೇಷ ಸಹಾಯವಾಣಿಯನ್ನು ಆರಂಭಿಸಲಾಗಿದೆ.
ಸಹಾಯವಾಣಿ ಸ್ಥಾಪನೆ: ದುಬೈ, ಶಾರ್ಜಾ, ಅಬುಧಾಬಿ ಮತ್ತು ಅಜ್ಮಾನ್ನಲ್ಲಿರುವ ಕನ್ನಡಿಗರಿಗೆ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನೆರವು ನೀಡಲು ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಸಹಾಯವಾಣಿಯ ಸಂಚಾಲಕ ಹಿದಾಯತ್ ಅಡ್ಡೂರ್ ಅವರು ತಂಡದೊಂದಿಗೆ ಕನ್ನಡಿಗರನ್ನು ಭೇಟಿ ಮಾಡಿ ಧೈರ್ಯ ತುಂಬುತ್ತಿದ್ದಾರೆ.
ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ ನಾಗರಾಜಪ್ಪ ಅವರು ಅನಿವಾಸಿ ಕನ್ನಡಿಗರು ಯಾವುದೇ ನೆರವು ಬೇಕಿದ್ದಲ್ಲಿ ಕೂಡಲೇ ಸಂಘದ ಸದಸ್ಯರನ್ನು ಸಂಪರ್ಕಿಸುವಂತೆ ಕೋರಿದ್ದಾರೆ. ಅಗತ್ಯವಿದ್ದರೆ ವೈದ್ಯಕೀಯ ನೆರವು ನೀಡುವುದಾಗಿಯೂ ಭರವಸೆ ನೀಡಿದ್ದಾರೆ.
ಕರ್ನಾಟಕ ಎನ್ಆರ್ಐ ಫೋರಂ (KNRIF) ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ಮಾತನಾಡಿ, ಯುಎಇಯಲ್ಲಿರುವ ಕನ್ನಡಿಗರು ಆತಂಕಕ್ಕೊಳಗಾಗದೆ ಶಾಂತವಾಗಿರಬೇಕು. ವಾಟ್ಸಾಪ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪರಿಶೀಲಿಸದ ಮತ್ತು ತಪ್ಪು ಮಾಹಿತಿಗಳನ್ನು ಹಂಚಬಾರದು ಎಂದು ಮನವಿ ಮಾಡಿದ್ದಾರೆ.
ಯುಎಇ ಸರ್ಕಾರವು ತನ್ನ ದೇಶದಲ್ಲಿರುವ ಎಲ್ಲಾ ಅನಿವಾಸಿಗಳ ಸುರಕ್ಷತೆಯ ಬಗ್ಗೆ ಭರವಸೆ ನೀಡಿದೆ. ಅಲ್ಲಿರುವ ಕನ್ನಡಿಗರು ಸದ್ಯಕ್ಕೆ ಸುರಕ್ಷಿತವಾಗಿದ್ದು, ವಿಮಾನ ಸೇವೆಗಳು ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳಲಿವೆ ಎಂದು ಕೈಗಾರಿಕೋದ್ಯಮಿ ರೊನಾಲ್ಡ್ ಕೊಲಾಸೊ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುರ್ತು ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಸರ್ಕಾರವು ‘ತುರ್ತು ಪರಿಹಾರ ನಿಧಿ’ಯನ್ನು ಘೋಷಿಸಬೇಕು ಮತ್ತು ಕನ್ನಡಿಗರ ಸುರಕ್ಷಿತ ವಾಪಸಾತಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅನಿವಾಸಿ ಕನ್ನಡಿಗರು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರವೂ ಕೂಡ ಕನ್ನಡಿಗರ ಸುರಕ್ಷತೆಯ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


