ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಉದ್ದೇಶದಿಂದ ಸ್ಥಾಪನೆಯಾಗಿದ್ದ ಕಾಂಗ್ರೆಸ್ ಪಕ್ಷವನ್ನು ಸ್ವಾತಂತ್ರ್ಯ ನಂತರ ನೆಹರು ಕುಟುಂಬ ಗಾಂಧೀಜಿಯವರ ಹೆಸರಿನಲ್ಲಿ ರಾಜಕೀಯ ಪಕ್ಷವಾಗಿ ಮಾಡಿಕೊಂಡಿದ್ದು ವಿಪರ್ಯಾಸ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ಸಂಜಯ್ ಬಾಟ್ಯಾ ಹೇಳಿದರು.
ಬುಧವಾರ ಗುಬ್ಬಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ದಲಿತ ಮುಖಂಡರು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಗಾಂಧೀಜಿ ಕಂಡಿದ್ದ ದೇಶದ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಾ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಡಿಎಸ್ ಎಸ್ ಮುಖಂಡ ನಿಟ್ಟೂರು ಗಂಗಾರಾಮ್ ಮಾತನಾಡಿ, ಬಿಜೆಪಿ ಪಕ್ಷವು ದಲಿತರನ್ನು ಗುರುತಿಸಿ ಉನ್ನತ ಸ್ಥಾನಮಾನಗಳನ್ನು ನೀಡಿದೆ. ತಾಲ್ಲೂಕಿನಲ್ಲಿ ಪರಿಶಿಷ್ಟರು ಪಕ್ಷದ ಪರವಾಗಿ ಇದ್ದು, ಬಿಜೆಪಿ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ರವರನ್ನು ಗೆಲ್ಲಿಸಿಕೊಳ್ಳುತ್ತೇವೆ. ಡಿಎಸ್ ಎಸ್ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅವರು ದಲಿತ ಹೋರಾಟಗಾರರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಅವರಿಗೆ ಅನುಕೂಲವಾಗುವ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕರೆ ನೀಡುತ್ತಿರುವುದು ವಿಪರ್ಯಾಸ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಲೋಕೇಶ್, ಮಂಜುನಾಥ್, ಮನು, ಬಸವರಾಜು ಚಂದ್ರ, ರಘು, ಸುರೇಶ್, ಲಕ್ಷ್ಮೀಪತಿ, ರಾಜೇಶ್, ವಿಜಯ್ ಕುಮಾರ್, ಮಲ್ಲೇಶ್, ಶಂಕರಣ್ಣ, ರಘು, ದೇವರಾಜು, ಶ್ರೀಧರ್ ಸೇರಿದಂತೆ ಅನೇಕ ದಲಿತ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ವರದಿ: ಮಂಜುನಾಥ್, ಗುಬ್ಬಿ