ಸರಗೂರು: ತಾಲೂಕಿನ ಇಟ್ನ ಮತ್ತು ಹಾಲುಗಡ ಶ್ರೀ ಚಿಕ್ಕದೇವಮ್ಮನವರ ಜಾತ್ರಾಮಹೋತ್ಸವದ ಗ್ರಾಮಗಳಲ್ಲಿ ಪ್ರಾಣಿಬಲಿ ತಡೆ ಸಂಪೂರ್ಣ ಯಶಸ್ವಿಯಾಗಿದ್ದು, ಮಾಂಸಾಹಾರದ ಬದಲಾಗಿ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರಿಂದ ಸಸ್ಯಾಹಾರ ಹಾಗೂ ಸಿಹಿ ಭೋಜನದ ಸೇವನೆ ಐತಿಹಾಸಿಕ ಮೈಲಿಗಲ್ಲುಯಾಗಿದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಪಶು ಪ್ರಾಣಿ ಬಲಿ ನಿರ್ಮೂಲನ ಮಹಾಸಂಘ ಮತ್ತು ಬಸವ ಧರ್ಮ ಜ್ಞಾನ ಪೀಠ ಅಧ್ಯಕ್ಷ ದಯಾನಂದ ಸ್ವಾಮೀಜಿ ತಿಳಿಸಿದರು.
ಶನಿವಾರದಂದು ಹಾಲಗಡ ಮತ್ತು ಇಟ್ನ ಗ್ರಾಮದಲ್ಲಿ ಯುಗಾದಿ ಹಬ್ಬದಿಂದ 3 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆದ ಹಿನ್ನೆಲೆಯಲ್ಲಿ ಹಾಲ್ಗಡ ಮತ್ತು ಇಟ್ನಾ ಗ್ರಾಮಗಳಲ್ಲಿ ನಡೆದ ಮಹೋತ್ಸವದಲ್ಲಿ ದೇವಿಯ ಮೆರವಣಿಗೆ ಸಂದರ್ಭದಲ್ಲಿ, ರಸ್ತೆ ಹಾಗೂ ಅಕ್ಕಪಕ್ಕದ ಜಮೀನುಗಳಲ್ಲಿ, ಹಾಲ್ಗಡದ ಮೈದಾನದಲ್ಲಿ, ಕಪಿಲ ನದಿಯ ದಡದಲ್ಲಿ ಎಲ್ಲಿಯೂ ಯಾವುದೇ ಪ್ರಾಣಿಗಳ ಬಲಿ ನಡೆಯಲಿಲ್ಲ, ಪ್ರಾಣಿಬಲಿ ಹಾಗೂ ರಕ್ತ ತರ್ಪಣೆಗೆ ಬದಲಾಗಿ ತೆಂಗಿನಕಾಯಿ, ಎಳನೀರ ಅಭಿಷೇಕ, ಅರಶಿನ ಕುಂಕುಮ ಅರ್ಚನೆ ಮೂಲಕ ದೇವಿಗೆ ಪೂಜೆ ಸಲ್ಲಿಸಿದರು ಅಂತಾ ಅವರು ತಿಳಿಸಿದರು.
ಕಳೆದ ಹಲವು ವರ್ಷಗಳ ಹಿಂದೆ ಈ ಜಾತ್ರೆಯಲ್ಲಿ ಹರಕೆಯ ಹೆಸರಿನಲ್ಲಿ ಸಾವಿರಾರು ಪ್ರಾಣಿಗಳ ಮಾರಣ ಹೋಮ ಜರುಗುತಿತ್ತು, ಎಲ್ಲಿ ನೋಡಿದರಲ್ಲಿ ರಕ್ತ ಹರಿಯುತ್ತಿತ್ತು, ಇಡೀ ಜಾತ್ರಾ ಪರಿಸರವೇ ರಕ್ತ ಮಯವಾಗುತಿತ್ತು. ಈ ಬಾರಿ ವಿಶೇಷವೇನೆಂದರೆ ಬಲಿ ನೀಡಲು ಯಾವುದೇ ಪ್ರಾಣಿಗಳನ್ನು ಯಾರೂ ಜಾತ್ರಾ ಪರಿಸರಕ್ಕೆ ತಂದಿರಲಿಲ್ಲ ಎಂಬುದು ಗಮನಾರ್ಹ, ಸ್ವತಃ ಭಕ್ತರೇ ಸ್ವಯಂ ಪ್ರೇರಣೆಯಿಂದ ಪ್ರಾಣಿಬಲಿ ಪದ್ಧತಿ ಸಂಪೂರ್ಣವಾಗಿ ಕೈಬಿಟ್ಟರುವುದರಿಂದ ಅಹಿಂಸಾತ್ಮಕವಾಗಿ ಸಾತ್ವಿಕ ರೀತಿಯಲ್ಲಿ ಧರ್ಮಾರಧನೆ ನಡೆಸಿದ್ದು ಈ ಸಾರಿಯ ವಿಶೇಷ, ಇದೊಂದು ಐತಿಹಾಸಿಕ ಮೈಲಿಗಲ್ಲಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಭಾರತೀಯ ಧಾರ್ಮಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವ ದಾಖಲೆಯಾಗಿದ್ದು ನಮಗೆ ಅಪಾರ ಹರ್ಷವನ್ನು ಉಂಟುಮಾಡಿದೆ ಅಹಿಂಸಾ ಮತ್ತು ಜೀವದಯಾ ಪರ ಸಂಘಟನೆಗಳು ಮತ್ತು ಕಾರ್ಯಕರ್ತರು ಕಂದಾಯ ಮತ್ತು ಪೊಲೀಸ್ ಇಲಾಖೆ ಹಾಗೂ ಅಕ್ಕಪಕ್ಕದ ಗ್ರಾಮಸ್ಥರಿಗೂ ಕಾರಣರಾಗಿದ್ದು ಅವರೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಪಶು ಪ್ರಾಣಿಬಲಿ ನಿರ್ಮೂಲನ ಜಾಗೃತಿ ಮಹಾಸಂಘ ಹಾಗೂ ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷರಾದ ಶ್ರೀ ದಯಾನಂದ ಸ್ವಾಮೀಜಿ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸುಮಾರು 2 ದಶಕಗಳ ಕಾಲ ಪ್ರತೀ ವರ್ಷ ನಿರಂತರ ನಡೆಸಿದ ಪ್ರಯತ್ನದ ಫಲಶೃತಿ ಇದಾಗಿದೆ ಎಂದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


