ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ದಯನೀಯ ಸೋಲಿನ ಕುರಿತು ರಾಷ್ಟ್ರೀಯ ನಾಯಕರು ವರದಿ ಕೇಳಿದ್ದರು. ಈಗ ಇರುವ ಮಾಹಿತಿಯನ್ನು ಕಳುಹಿಸಿ ಕೊಡಲಾಗಿದೆ. ಸದ್ಯದಲ್ಲೇ ಸೋಲಿನ ಕುರಿತು ಆತ್ಮಾವಲೋಕನ ಸಭೆ ನಡೆಸಿ ತಪ್ಪು ತಿದ್ದುಕೊಳ್ಳುವ ಕೆಲಸ ಮಾಡುತ್ತೇವೆ ಎಂದು ನಿರ್ಗಮಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸೋಲು, ಗೆಲುವಿನ ಬಗ್ಗೆ ಪರಾಮರ್ಶೆ ಸಭೆಯಲ್ಲಿ ಈ ಬಾರಿ ಚುನಾವಣೆಯಲ್ಲಿ ಕಳಪೆ ಸಾಧನೆ ಮಾಡಿದ ಕುರಿತು ಪ್ರಾಥಮಿಕ ಮಾಹಿತಿಗಳ ಆಧಾರದಲ್ಲಿ ಚರ್ಚಿಸಲಾಯಿತು. 66 ಸ್ಥಾನ ಮಾತ್ರ ಬಿಜೆಪಿ ಗೆದ್ದಿದ್ದು, ಇಡೀ ರಾಜಕೀಯ ಬೆಳವಣಿಗೆ ಬಗ್ಗೆ ಆತ್ಮಾವಲೋಕನ ಮಾಡುವ ಕುರಿತು ಸಮಾಲೋಚನೆ ನಡೆದಿದೆ.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, 2013ರಲ್ಲಿ 40 ಸೀಟ್ ಬಂದಿತ್ತು. ಈಗ ಅದಕ್ಕಿಂತ ಹೆಚ್ಚು ಸೀಟ್ ಗೆದ್ದಿದ್ದೇವೆ. ಸೋಲನ್ನು ಅತ್ಯಂತ ವಿನಯವಾಗಿ ಸ್ವೀಕರಿಸಿದ್ದೇವೆ ಎಂದು ಹೇಳಿದರು.
ಕ್ಷೇತ್ರಗಳಲ್ಲಿನ ಆಡಳಿತ ವಿರೋಧಿ ಅಲೆ ಕುರಿತು ಚರ್ಚೆಯಾಗಿದೆ. ಇಂದಿನ ಸಭೆಯಲ್ಲಿ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ವಿಚಾರದ ಕುರಿತು ಯಾವುದೇ ಚರ್ಚೆಯಾಗಿಲ್ಲ, ಸೋಲನ್ನು ನಾವೆಲ್ಲ ಸ್ವೀಕಾರ ಮಾಡಿದ್ದೇವೆ. ನಾನೂ ಸೋಲಿನ ಹೊಣೆ ಹೊತ್ತಿದ್ದೇನೆ. ಕಟೀಲ್ ಕೂಡ ಸೋಲಿನ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಎಲ್ಲರೂ ಆತ್ಮಾವಲೋಕನ ಮಾಡಿ ಕಾರಣ ಹುಡುಕುತ್ತೇವೆ ಎಂದರು.
ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಇರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಹಂಗಾಮಿ ಸಿಎಂ, ಕಾದು ನೋಡೋಣ, ಯಾರು ಸಿಎಂ ಆಗ್ತಾರೆ ಅಂತ. ಇಬ್ಬರಿಗೂ ಆಲ್ ದಿ ಬೆಸ್ಟ್ ಹೇಳ್ತೀನಿ. ಪ್ರತಿಪಕ್ಷ ನಾಯಕನ ಆಯ್ಕೆ ಕುರಿತು ನಮ್ಮಲ್ಲಿ ಇನ್ನು ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯ ಭರವಸೆಗಳ ಜಾರಿ ಮಾಡುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಮೊದಲು ಕಾಂಗ್ರೆಸ್ನವ್ರು ಸರ್ಕಾರ ಮಾಡಲಿ, ಆ ನಂತರ ಕ್ಯಾಬಿನೆಟ್ ಕರೆದು ಏನು ಮಾಡ್ತಾರೆ ಎಂದು ನೋಡೋಣ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


