ಬಿಜೆಪಿ ಒಂದು ಕೋಮುವಾದಿ ಪಕ್ಷ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ರನ್ನು ಪರಸ್ಪರ ಎತ್ತಿಕಟ್ಟಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಿಜಾಬ್, ಹಲಾಲ್ ಇವೆಲ್ಲ ವಿವಾದವಾಗಿಸುವುದು ಜನರಿಗೆ ಬೇಕಿತ್ತಾ? ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ಜನರಿಗೆ ವ್ಯಾಪಾರ ನಿರ್ಬಂಧ ಮಾಡುವಂತ ಕೀಳು ಮಟ್ಟಕ್ಕೆ ಇಳಿದ ಬಿಜೆಪಿಗೆ ನಾಚಿಕೆಯಾಗಬೇಕು. ಅಂಬೇಡ್ಕರರ ಸಂವಿಧಾನದ ಆಶಯ ಏನು? ಎಲ್ಲರಿಗೂ ಸಮಪಾಲು, ಸಮಬಾಳು,ಸಹಿಷ್ಣುತೆ,ಸಹಬಾಳ್ವೆಯಲ್ಲಿನಂಬಿಕೆಯಿಟ್ಟುಕೊಂಡವರು ನಾವು, ಮನುಷ್ಯತ್ವಕ್ಕೆ ವಿರುದ್ಧ ಇರುವವರು ಬಿಜೆಪಿಯವರು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾಡಿದರು.
ತುಮಕೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಕುವೆಂಪು ಅವರು ನಾಡನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದರು, ರಾಷ್ಟ್ರಗೀತೆಯನ್ನು ಹಾಡುತ್ತಲೇ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ.
ಜಗತ್ತಿನ ಯಾವ ಧರ್ಮವೂ ಬೇರೆಯವರನ್ನು ಕೊಲ್ಲು ಎಂದು ಹೇಳುವುದಿಲ್ಲ. ಮನುಷ್ಯ ಮನುಷ್ಯನನ್ನು ಪ್ರೀತಿಸು ಎಂದು ಎಲ್ಲ ಧರ್ಮಗಳು ಹೇಳುತ್ತವೆ. ಬಿಜೆಪಿ ಅಧಿಕಾರಕ್ಕೆ ಬಂದು ಜನ ಆತಂಕದಿಂದ ಬದುಕುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಜನ ನೆಮ್ಮದಿಯಿಂದ ಬದುಕಬೇಕು ಎಂದಾದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಸ್ಯಾಂಟ್ರೋ ರವಿಯನ್ನು ಬಿಜೆಪಿಯವರೇ ಗುಜರಾತಿಗೆ ಕಳಿಸಿ, ಕಣ್ಣೆರೊಸಲು ಇವರೇ ಹಿಡಿದುಕೊಂಡು ಬಂದರು. ಬಿಜೆಪಿಯವರು ಅವನ ಜೊತೆ ಷಾಮೀಲಾಗದೆ ಹೋಗಿದ್ದರೆ ಪೊಲೀಸ್ ಅಧಿಕಾರಿಗಳನ್ನು ಆತ ವರ್ಗಾವಣೆ ಮಾಡಿಸಲು ಸಾಧ್ಯವಾಗುತ್ತಿತ್ತಾ? ಸ್ಯಾಂಟ್ರೋನನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲು ಅರ್ಜಿಯನ್ನೂ ಹಾಕಲಿಲ್ಲ. ಇದೆಲ್ಲ ಒಂದು ನಾಟಕ ಅಷ್ಟೇ ಎಂದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಸಚಿವ ಈಶ್ವರಪ್ಪ ಕಾರಣ. ತುಮಕೂರಿನ ಗುತ್ತಿಗೆದಾರ ಪ್ರಸಾದ್ ಅವರು ದೇವರಾಯನದುರ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡರು, ಇದಕ್ಕೆ ಯಾರು ಕಾರಣ? ಬೆಂಗಳೂರಿನ ಮಹದೇವಪುರದ ಪ್ರದೀಪ್ ಎಂಬುವ ವ್ಯಕ್ತಿ ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ, ಶಾಸಕ ಅರವಿಂದ ಲಿಂಬಾವಳಿ ಅವರು ಪ್ರದೀಪ್ ಗೆ ಅನ್ಯಾಯ ಮಾಡಿದ್ದ ಜನರ ಜೊತೆ ಸೇರಿಕೊಂಡಿದ್ದು ಆತ ಸಾಯಲು ಕಾರಣ. ಕೆ.ಆರ್ ಪುರಂನ ಇನ್ಸ್ ಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡಾಗ ಶವ ನೋಡಲು ಹೋದ ಸಚಿವ ಎಂಟಿಬಿ ನಾಗರಾಜ್ ಅವರು 70–80 ಲಕ್ಷ ಲಂಚ ಕೊಟ್ಟು ವರ್ಗಾವಣೆ ಮಾಡಿಕೊಂಡು ಬಂದರೆ ಸಾಯದೆ ಇನ್ನೇನು ಎಂದಿದ್ದರು.
ಶಿವಕುಮಾರ್ ಎಂಬ ಗುತ್ತಿಗೆದಾರ ತನಗೆ ದಯಾಮರಣ ಕೊಡಿ ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. 40% ಕಮಿಷನ್ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಸುಮಾರು 20 ರಿಂದ 30 ಸಾವಿರ ಕೋಟಿ ಬಿಲ್ ಹಣವನ್ನು ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ನೀಡದೆ ಬಾಕಿ ಉಳಿಸಿಕೊಂಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ನಾವು ಅಧಿಕಾರಕ್ಕೆ ಬಂದರೆ ಬಡಜನರಿಗೆ ಉಚಿತವಾಗಿ 10 ಕೆ.ಜಿ ಅಕ್ಕಿ ನೀಡುತ್ತೇವೆ. ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದರೆ ಗುಜರಾತ್, ಉತ್ತರ ಪ್ರದೇಶದಲ್ಲಿ ಉಚಿತವಾಗಿ ಅಕ್ಕಿ ನೀಡುತ್ತಿದ್ದಾರ? ಯಾಕೆ ಕೊಡುತ್ತಿಲ್ಲ ಬೊಮ್ಮಾಯಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡುವ ಎಸ್,ಸಿ,ಪಿ/ಟಿ,ಎಸ್,ಪಿ ಯೋಜನೆ ಜಾರಿ ಮಾಡಿದ್ದು ನಮ್ಮ ಸರ್ಕಾರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಜಾರಿಗೆ ಮಾಡಿದ್ದು ನಮ್ಮ ಸರ್ಕಾರ. ದೇಶದಲ್ಲೆ ಮೊದಲ ಬಾರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಿದವರು ನಾವು. ಮೊನ್ನೆ ಪ್ರಧಾನಿಗಳು ಕಲಬುರಗಿಯಲ್ಲಿ ಹಕ್ಕುಪತ್ರ ಹಂಚಿದರು. ಆದರೆ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಕಾನೂನು ರೂಪಿಸಿ ಜಾರಿಗೆ ಕೊಟ್ಟಿದ್ದು ನಾವು. ಅಡುಗೆ ಮಾಡಿದವರು ನಾವು, ಊಟ ಮಾಡಿದ್ದು ಬಿಜೆಪಿ. ತಾಂಡಗಳು, ಹಟ್ಟಿಗಳು, ಮಜರೆಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕಾನೂನು ತಂದಿದ್ದು ನಾವು. ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ, ನಮ್ಮವರು ಜನರಿಗೆ ಸತ್ಯ ಹೇಳಿದರೆ ಸಾಕು ಎಂದು ಅವರು ಹೇಳಿದರು.
ಬಿಜೆಪಿಯವರ ವಿರುದ್ಧ ನಾವು ಆರೋಪ ಮಾಡಿದ್ದಕ್ಕೆ ಈಗ ಅವರು ನಮ್ಮ ವಿರುದ್ಧ ಲೋಕಾಯುಕ್ತ ತನಿಖೆ ಮಾಡಿಸುತ್ತೇವೆ ಎನ್ನುತ್ತಿದ್ದಾರೆ. ಕಳ್ಳನಿಗೆ ಕಳ್ಳ ಎಂದರೆ ಕೋಪ ಬರುತ್ತಂತೆ ಹಾಗೆ ಬಿಜೆಪಿಯವರು ನಮ್ಮ ಮೇಲೆ ಮುಗಿಬಿದ್ದಿದ್ದಾರೆ. ಹಿಂದೆ 5 ವರ್ಷ ವಿರೋಧ ಪಕ್ಷದಲ್ಲಿದ್ದಾಗ, ಕಳೆದ ಮೂರೂವರೆ ವರ್ಷದಿಂದ ಅಧಿಕಾರದಲ್ಲಿದ್ದಾಗ ಚಕಾರವೆತ್ತದ ಬಿಜೆಪಿ ಈಗ ನಾವು 40% ಕಮಿಷನ್ ಹಗರಣಗಳನ್ನು ಬಿಚ್ಚಿಡಲು ಆರಂಭ ಮಾಡಿದ ಮೇಲೆ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದನ್ನು ಜನ ನಂಬುತ್ತಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನಾವು ಮಾಡುವ ಆರೋಪ, ಬಿಜೆಪಿ ಮಾಡುತ್ತಿರುವ ಆರೋಪ ಎಲ್ಲವನ್ನು ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ ತನಿಖೆಗೆ ವಹಿಸಲಿ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಇದಕ್ಕೆ ಬೊಮ್ಮಾಯಿ ಅವರಿಗೆ ಧಮ್, ತಾಕತ್ ಇದೆಯಾ ಹೇಳಲಿ. ಬಹಳಾ ದಿನ ಭ್ರಷ್ಟಾಚಾರ ಮಾಡಿ ಉಳಿಯಲು ಸಾಧ್ಯವಾಗಲ್ಲ. ವಿಧಾನಸೌಧದ ಗೋಡೆಗಳು ಕೂಡ ಲಂಚ, ಲಂಚ ಎಂದು ಪಿಸುಗುಟ್ಟಲು ಆರಂಭ ಮಾಡಿದೆ ಎಂದು ಅವರು ಹೇಳಿದರು.
ಹಿಂದೆ ನಾವು ಅಧಿಕಾರದಲ್ಲಿದ್ದಾಗ ಕೊಬ್ಬರಿಗೆ ಪ್ರೋತ್ಸಾಹಧನವನ್ನು ನೀಡಿದ್ದೆವು. ಬರಗಾಲ ಬಂದಾಗ ಪ್ರತೀ ತೆಂಗಿನ ಗಿಡಕ್ಕೆ 1000 ರೂ. ನೀಡಿದ್ದೆವು. ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೊಬ್ಬರಿ, ತೆಂಗಿಗೆ ಪ್ರೋತ್ಸಾಹಧನವನ್ನು ಖಂಡಿತಾ ನೀಡುತ್ತೇವೆ. ನಿಮ್ಮ ಸಹಕಾರ ಕಾಂಗ್ರೆಸ್ ಗೆ ಇರಲಿ. ಕೋಮುವಾದಿ, ಭ್ರಷ್ಟ ಬಿಜೆಪಿಯನ್ನು ಅಧಿಕಾರದಿಂದ ಕಿತ್ತು ಹಾಕುವ ಕೆಲಸವನ್ನು ತುಮಕೂರಿನ ಜನ ಮಾಡಬೇಕು. ತುಮಕೂರಿನ ಎಲ್ಲಾ ನಾಯಕರು ಒಂದಾಗಿ ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಕನಿಷ್ಠ 8 ರಿಂದ 9 ಸ್ಥಾನಗಳನ್ನು ಗೆಲ್ಲಲು ಶ್ರಮಿಸಿಬೇಕು ಎಂದು ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy