ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗಾಗಿ ನಾಡಕಚೇರಿ, ಆಸ್ಪತ್ರೆಗಳಿಗೆ ಅಲೆದಾಡಬೇಕಿಲ್ಲ. ಕಂದಾಯ ಇಲಾಖೆ ಅಂಚೆ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಇನ್ನುಮುಂದೆ ಈ ಪ್ರಮಾಣ ಪತ್ರಗಳು ಸ್ಪೀಡ್ ಪೋಸ್ಟ್‌ನಲ್ಲಿ ನಿಮ್ಮ ಮನೆಗೆ ಬರಲಿದೆ. ಆನ್‌ಲೈನ್ & ಆಫ್‌ಲೈನ್‌ನಲ್ಲಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಅಂಚೆ ಇಲಾಖೆಯೇ ಸಂಬಂಧಪಟ್ಟ ಕಚೇರಿಗಳಿಂದ ಅದನ್ನು ಸಂಗ್ರಹಿಸಿ ನಿಖರವಾದ ವಿಳಾಸಕ್ಕೆ ತಲುಪಿಸಲಿದೆ. ರಾಜ್ಯದ ಎಲ್ಲಾ ಅಂಚೆ ಕಚೇರಿಗಳು ಕೂಡ ಈ ಸೇವೆಯನ್ನು ಒದಗಿಸಲಿವೆ.
ಹೇಗಿದೆ ಈ ಸೇವೆ?
ಹಾಗೆಯೇ ವಿವಿಧ ಕಾರಣಗಳಿಗಾಗಿ ಒಂದೊಮ್ಮೆ ಮರಣ ಸಂಭವಿಸಿದ್ದಲ್ಲಿ, ಅಂತಹವರು ಮರಣ ಪ್ರಮಾಣ ಪತ್ರಕ್ಕಾಗಿ ನಗರದ ಸ್ಥಳೀಯ ಸಂಸ್ಥೆಗಳಿಂದಲೋ ಅಥವಾ ಸರಕಾರಿ ಆಸ್ಪತ್ರೆಯಿಂದಲೋ ಪ್ರಮಾಣ ಪತ್ರಗಳನ್ನು ಪಡೆಯಬೇಕಾಗಿರುತ್ತದೆ.
ಇನ್ಮುಂದೆ ಇರಲ್ಲ ಅಲೆದಾಟ:
ಆದರೆ ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗ ಇದಕ್ಕಾಗಿ ನಡೆಯುತ್ತಿದ್ದ ಅಲೆದಾಟವನ್ನು ತಪ್ಪಿಸಿದೆ. ಸುಲಭವಾಗಿ ಮನೆ ಬಾಗಿಲಿಗೆ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ವಿಳಾಸಕ್ಕೆ ಜನನ ಇಲ್ಲವೇ ಮರಣ ಪ್ರಮಾಣ ಪತ್ರಗಳನ್ನು ತಲುಪಿಸುತ್ತಿದೆ.
ಅರ್ಜಿ ಸಲ್ಲಿಸುವುದು ಹೇಗೆ?:
ಜನನ ಅಥವಾ ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವವರು ಖಾಸಗಿ ಆಸ್ಪತ್ರೆಗಳಾದರೆ ಸ್ಥಳೀಯ ಸಂಸ್ಥೆ, ಸರಕಾರಿ ಆಸ್ಪತ್ರೆಗಳಲ್ಲಾದರೆ ಬಹುತೇಕ ಅಲ್ಲಿಯೇ ಜನನ/ಮರಣ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಅರ್ಜಿದಾರರು ಸಂಬಂಧಿಸಿದ ಪ್ರಮಾಣ ಪತ್ರಕ್ಕೆ ಅರ್ಜಿ ಭರ್ತಿ ಮಾಡಿ ಕೊಡುವ ವೇಳೆಯೇ ಸ್ಪೀಡ್ ಪೋಸ್ಟ್ ಮೂಲಕ ಪ್ರಮಾಣ ಪತ್ರ ಪಡೆಯುವುದಾಗಿ ಮತ್ತೊಂದು ಕಿರು ಅರ್ಜಿಯನ್ನು ಸಲ್ಲಿಸಬೇಕು. ಹಾಗಿದ್ದಲ್ಲಿ ನಿಗದಿತ ದಿನಗಳಲ್ಲಿ ಅಂಚೆ ಮೂಲಕ ನೀವು ಬಯಸಿದ ಪ್ರಮಾಣ ಪತ್ರ ಪಡೆಯಬಹುದಾಗಿದೆ.
ಕನಿಷ್ಟ ಅಂಚೆ ವೆಚ್ಚ:
ಹೀಗೆ ಅರ್ಜಿ ತುಂಬಿ ಪ್ರಮಾಣ ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ಬಯಸುವವರು ತಮ್ಮ ಪ್ರಮಾಣ ಪತ್ರ ಪಡೆಯುವ ವೇಳೆ ಪೋಸ್ಟ್ ಮ್ಯಾನ್ ಮೂಲಕ ನಿಗದಿಪಡಿಸಿದ ₹100 ಅನ್ನು ನೀಡಿ ಪಡೆಯಬೇಕಾಗುತ್ತದೆ.
ಸ್ಪೀಡ್ ಪೋಸ್ಟ್ನಿಂದ ಲಾಭವೇನು?
ಸಾಮಾನ್ಯವಾಗಿ ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಮಗು ಜನಿಸಿದ್ದಲ್ಲಿ, ಜನನ ಪ್ರಮಾಣ ಪತ್ರವನ್ನು ಮಂಗಳೂರು ಮಹಾನಗರ ಪಾಲಿಕೆಯಿಂದ ಪಡೆಯಬೇಕಾಗುತ್ತದೆ.
ಹಾಗೆ ಮಗುವಿನ ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಎರಡೆರಡು ಬಾರಿ ಕಚೇರಿಗೆ ತೆರಳಬೇಕಿತ್ತು. ಏಕೆಂದರೆ, ಮೊದಲಿಗೆ ಒಮ್ಮೆ ಅರ್ಜಿ ಸಲ್ಲಿಸಿ ಹೋದರೆ, ಮತ್ತೊಮ್ಮೆ ಪ್ರಮಾಣ ಪತ್ರ ಪಡೆಯಲು ಆಗಮಿಸಬೇಕಿತ್ತು. ಅದರಲ್ಲೂ ಸರ್ವರ್ ಸಮಸ್ಯೆಗಳು ಉಂಟಾದರೆ ಮತ್ತೊಂದು ಬಾರಿ ಹೋಗುವ ಪ್ರಮೇಯವೂ ಎದುರಾಗುತ್ತಿತ್ತು. ಆದರೆ, ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕ ಶ್ರೀಹರ್ಷ ಇವರಿಂದ ಮೂಡಿದ ಅದ್ಭುತ ಪರಿಕಲ್ಪನೆ ಈಗ ಅನಗತ್ಯ ಅಲೆದಾಟವನ್ನು ತಪ್ಪಿಸಿದೆ.
ಎಲ್ಲೆಲ್ಲೆ ಸೇವೆ ಲಭ್ಯ?:
ಮಂಗಳೂರು ಅಂಚೆ ವಿಭಾಗವು ಆರಂಭಿಕ ಹಂತದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಜೊತೆ ಒಡಂಬಡಿಕೆ ನಡೆಸಿಕೊಳ್ಳುವ ಮೂಲಕ ಇಂತಹ ವಿನೂತನ ಕಾರ್ಯಕ್ರಮ ಆರಂಭಿಸಿತ್ತು. ಇದೀಗ ಈ ಸೇವೆಯು ಮಂಗಳೂರಿನ ಜಿಲ್ಲಾ ಆಸ್ಪತ್ರೆಗಳಾದ ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಲೇಡಿ ಗೋಶನ್ ಸರಕಾರಿ ಆಸ್ಪತ್ರೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಾದ ಕೋಟೆಕಾರ್ ಪಟ್ಟಣ ಪಂಚಾಯತ್, ಕಿನ್ನಿಗೋಳಿ ಪಟ್ಟಣ ಪಂಚಾಯತ್, ಬಜ್ಪೆ ಪಟ್ಟಣ ಪಂಚಾಯತ್, ಮುಲ್ಕಿ ಪಟ್ಟಣ ಪಂಚಾಯತ್, ಸೋಮೇಶ್ವರ ನಗರ ಪುರಸಭೆ ಹಾಗೂ ಉಳ್ಳಾಲ ನಗರ ಪುರಸಭೆಗಳಿಗೆ ವಿಸ್ತರಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ:
ಆಸಕ್ತರು ಈ ಕುರಿತು ಯಾವುದೇ ಹೆಚ್ಚಿನ ಮಾಹಿತಿ ಪಡೆಯಲು ಮಂಗಳೂರು ಅಂಚೆ ವಿಭಾಗದ ಕಚೇರಿ ದೂರವಾಣಿ 0824-2218400 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


