ಬಳ್ಳಾರಿಯಲ್ಲಿ ಬ್ಯಾನರ್ ವಿವಾದದ ಕಿಚ್ಚು ತಣ್ಣಗಾಗುವ ಮೊದಲೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದ್ದು, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ‘ಮಾಡೆಲ್ ಹೌಸ್’ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಕಂಟೋನೆಂಟ್ ಪ್ರದೇಶದ ಜಿ–ಸ್ಟಾರ್ ಲೇಔಟ್‌ನಲ್ಲಿ ಸುಮಾರು 73 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ಸುಸಜ್ಜಿತ ಮಾದರಿ ಮನೆಯ ಬಾಗಿಲು, ಕಿಟಕಿಗಳನ್ನು ಮುರಿದ ದುಷ್ಕರ್ಮಿಗಳು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಈ ಕೃತ್ಯದ ಹಿಂದೆ ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರ ಕೈವಾಡವಿದೆ ಎಂದು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಗಂಭೀರವಾಗಿ ಆರೋಪಿಸಿದ್ದಾರೆ. “ಬಳ್ಳಾರಿಯ ಭಸ್ಮಾಸುರನೇ ಈ ಬೆಂಕಿ ಹಚ್ಚುವ ಕೆಲಸ ಮಾಡಿಸಿದ್ದಾರೆ” ಎಂದು ಅವರು ಕಿಡಿಕಾರಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರೂ, ಮನೆಯ ಬೆಲೆಬಾಳುವ ಪೀಠೋಪಕರಣಗಳು ಹಾಗೂ ಕಟ್ಟಿಗೆಯ ಕಂಬಗಳು ಸುಟ್ಟು ಭಸ್ಮವಾಗಿವೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆಯಿಂದಾಗಿ ಬಳ್ಳಾರಿಯಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


