ನವದೆಹಲಿ: ಕಳೆದ ನಾಲ್ಕು ದಿನಗಳಿಂದ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು ಧರಣಿ ಕುಳಿತಿದ್ದು, ಇಂದು ಐದನೇ ದಿನವೂ ಕುಸ್ತಿಪಟುಗಳು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮತ್ತು ಅದರ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.
ಕುಸ್ತಿಪಟುಗಳು ಬುಧವಾರ ತಡರಾತ್ರಿ ಜಂತರ್ ಮಂತರ್‌ನಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಿ ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಭಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಸೇರಿದಂತೆ ಧರಣಿಯಲ್ಲಿ ಕುಳಿತಿದ್ದ ಕುಸ್ತಿಪಟುಗಳು ಛತ್ತೀಸ್‌ಗಢದ ದಾಂತೇವಾಡದಲ್ಲಿ ಹುತಾತ್ಮರಾದ ಯೋಧರಿಗೆ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ, ಕುಸ್ತಿಪಟುಗಳು ತಮ್ಮ ಮಾತನ್ನು ಪ್ರಧಾನಿ ಕೂಡ ಆಲಿಸಬೇಕು ಎಂದು ಕೇಳಿಕೊಂಡರು. ಕುಸ್ತಿಪಟುಗಳು ತಮ್ಮ ಕುಂದು ಕೊರತೆಗಳನ್ನು ಪ್ರಧಾನಿ ಬಳಿ ಹೇಳಿಕೊಳ್ಳಲು ಸಮಯಾವಕಾಶ ನೀಡುವಂತೆ ಮನವಿ ಮಾಡಿದರು.
ಕುಸ್ತಿ ಫೆಡರೇಶನ್ ಅಧ್ಯಕ್ಷ ಭೂಷಣ್ ಶರಣ್ ಸಿಂಗ್ ವಿರುದ್ಧ ತನಿಖೆಗೆ ಒತ್ತಾಯಿಸಿ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶ್ ಫೊಗಟ್, ರವಿ ದಹಿಯಾ ಹಾಗೂ ಸಾಕ್ಷಿ ಮಲಿಕ್ ಸೇರಿದಂತೆ ಅನೇಕರು ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ರಾಜಕಾರಣಿಗಳು ಮತ್ತು ರೈತ ಸಂಘಟನೆಗಳ ಮುಖಂಡರು ಭೇಟಿ ನೀಡಿ ತಮ್ಮ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.
ನಿನ್ನೆ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಕುಸ್ತಿಪಟುಗಳನ್ನು ಭೇಟಿಯಾಗಿ ಮಾತನಾಡಿದ ಬಳಿಕ ಕ್ರೀಡೆಯಲ್ಲಿ ತಮ್ಮ ಸಾಧನೆ ಮತ್ತು ಯಶಸ್ವಿಯಿಂದ ದೇಶದಲ್ಲಿ ಗೌರವವನ್ನು ಪಡೆದಿದ್ದ ಕ್ರೀಡಾಪಟುಗಳು ಈಗ ನ್ಯಾಯಕ್ಕಾಗಿ ಬೀದಿಯಲ್ಲಿ ಹೋರಾಡುತ್ತಿರುವುದು ತುಂಬಾ ನಾಚಿಕೆಗೇಡಿನ ವಿಷಯವಾಗಿದೆ. ಈ ಹೋರಾಟವು ಕೊನೆಗೊಳ್ಳುವವರೆಗೂ ಎಲ್ಲರೂ ಬೆಂಬಲಿಸಬೇಕೆಂದು ಮನವಿ ಮಾಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


