ಕೊರಟಗೆರೆ: ಒಂದೆಡೆ ಮಳೆ ಆರ್ಭಟದಿಂದ ಬೆಳೆ ನಷ್ಟ ಮತ್ತು ಮೇವಿನ ತೊಂದರೆ ಅನುಭವಿಸುತ್ತಿರುವ ತಾಲ್ಲೂಕಿನ ರೈತರಿಗೆ ಗಾಯದ ಮೇಲೆ ಬರೆ ಎಂಬಂತೆ ಜೀವನಾಡಿ ರಾಸುಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿರುವುದು ತಾಲ್ಲೂಕಿನ ರೈತಾಪಿ ವರ್ಗಕ್ಕೆ ಮತ್ತೊಂದು ಆಘಾತವಾಗಿದೆ.
ಕೊರಟಗೆರೆ ಪಶುಪಾಲನಾ ಇಲಾಖೆಯ ಮಾಹಿತಿಯಂತೆ ಅ-22 ರ ದೈನಂದಿನ ಮಾಹಿತಿ ಪ್ರಕಾರ ರೋಗ ಕಂಡುಬಂದ ಗ್ರಾಮಗಳ ಒಟ್ಟು ಸಂಖ್ಯೆ 51, ರೋಗಕ್ಕೆ ತುತ್ತಾದ ಜಾನುವಾರುಗಳ ಸಂಖ್ಯೆ 100, ಚಿಕಿತ್ಸೆಯಿಂದ ಗುಣಮುಖ ಹೊಂದಿದ ಜಾನುವಾರುಗಳ ಸಂಖ್ಯೆ 26, ರೋಗದಿಂದ ಮರಣ ಹೊಂದಿದ ಜಾನುವಾರುಗಳ ಸಂಖ್ಯೆ 4 , ಇದುವರೆಗೆ IAH ಹಾಗೂ VB ಯಿಂದ ಸರಬರಾಜಾದ ಲಸಿಕೆ ಪ್ರಮಾಣ ಸಂಖ್ಯೆ ( ಡೋಸ್ ) 7.000 , ಲಸಿಕೆ ಹಾಕಿದ ಜಾನುವಾರುಗಳ ಸಂಖ್ಯೆ 5899 ಆಗಿದೆ .ಎಂದು ತಾಲ್ಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ.ಸಿದ್ದನಗೌಡ ಮಾಹಿತಿ ನೀಡಿದ್ದಾರೆ.
ರೋಗದ ಲಕ್ಷಣಗಳು ಕಂಡುಬರುವುದು ಹೇಗೆ?
ಅತಿಯಾದ ಜ್ವರ, ಕಣ್ಣುಗಳಿಂದ ನೀರು ಸೋರುವುದು , ನಿಶಕ್ತಿ , ಕಾಲುಗಳಲ್ಲಿ ಬಾವು ಮತ್ತು ಕುಂಟುವುದು, ಜಾನುವಾರುಗಳ ಚರ್ಮದ ಮೇಲೆ 2-5 ಸೆ.ಮಿ ನಷ್ಟು ಅಗಲವಿರುವ ಗಂಟು ಕಾಣಿಸಿಕೊಂಡು ನಂತರ ಒಡೆದು ಗಾಯವಾಗಿ ನೋವುಂಟಾಗುತ್ತದೆ. ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ನೊಣಗಳಿಂದ ಹುಳುಗಳು ಬಿದ್ದು ಹುಣ್ಣಾಗುತ್ತದೆ. ಹಾಲಿನ ಇಳುವರಿ ಕಡಿಮೆಯಾಗುವುದು ಕೆಲಸದ ಸಾಮರ್ಥ್ಯ ಕುಂಠಿತವಾಗುತ್ತದೆ. ಕರುಗಳು ತೀವ್ರವಾಗಿ ಬಳಲಿ ಸಾವಿಗೀಡಾಗಬಹುದು. ಮಿಶ್ರತಳಿ, ಜರ್ಸಿ , ಹೆಚ್ ಎಫ್ ,ರಾಸುಗಳು ಹಾಗೂ ಕರುಗಳು ಈ ರೋಗದಿಂದ ಹೆಚ್ಚು ಬಳಲುತ್ತವೆ.
ರೋಗ ಹರಡುವುದು ಹೇಗೆ?
ಸೊಳ್ಳೆ, ಉಣ್ಣೆ, ನೊಣ ಹಾಗೂ ವಿವಿಧ ಕಚ್ಚುವ ಕೀಟಗಳಿಂದ ,ಕಲುಷಿತಗೊಂಡ ನೀರು ಹಾಗೂ ಆಹಾರದಿಂದ ,ಜಾನುವಾರುಗಳ ನೇರ ಸಂಪರ್ಕದಿಂದ ,ರೋಗ ಹರಡುವಿಕೆ ಪ್ರಮಾಣ ಶೇ.10- 20 ರಷ್ಟು ಹಾಗೂ ರೋಗದ ಸಾವಿನ ಪ್ರಮಾಣ 1-5 ರಷ್ಟು ಇರುತ್ತದೆ.
ಈ ರೋಗಕ್ಕೆ ಚಿಕಿತ್ಸೆ ಹಾಗೂ ತಡೆಗಟ್ಟುವುದು ಹೇಗೆ?
ಈ ರೋಗವು ವೈರಾಣು ರೋಗವಾಗಿರುವುದರಿಂದ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ , ಜಾನುವಾರುಗಳಿಗೆ ರೋಗದ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ನೀಡಬೇಕಾಗುತ್ತದೆ. ದೇಹವನ್ನು ತಂಪಾಗಿಸಲು ಮೈಮೇಲೆ ಹಸಿ ಬಟ್ಟೆ ಹಾಕುವುದು ಹಾಗೂ ತಂಪಾದ ಜಾಗದಲ್ಲಿ ಕಟ್ಟುವುದು, ಚರ್ಮದ ಮೇಲಿನ ಗಾಯಗಳಿಗೆ ಪೋಟ್ಯಾಸಿಯಂ ಪರಮ್ಯಾಂಗನೇಟ್ ದ್ರಾವಣದಿಂದ ತೊಳೆದು ಐಯೋಡಿನ್ ದ್ರಾವಣ . ಮುಲಾಮು ಹಾಗೂ ಬೇವಿನ ಎಣ್ಣೆ ಲೇಪಿಸಬೇಕು , ರೋಗ ಹರಡುವುದನ್ನು ತಡೆಯಲು ರೋಗಗ್ರಸ್ತ ಜಾನುವಾರುಗಳನ್ನು ಬೇರ್ಪಡಿಸಬೇಕು. ರೋಗಗ್ರಸ್ತ ಜಾನುವಾರುಗಳಿಗೆ ಉಪಯೋಗಿಸಿದ ಎಲ್ಲಾ ಸಾಮಗ್ರಿಗಳನ್ನು ಸ್ವಚ್ಚಗೊಳಿಸಬೇಕು, ಹಸಿರು ಮೇವು, ಪೌಷ್ಟಿಕ ಆಹಾರ ಹಾಗೂ ಲವಣ ಮಿಶ್ರಣ ನೀಡಬೇಕು. ಕುಡಿಯುವ ನೀರಿನಲ್ಲಿ ಬೆಲ್ಲ, ಉಪ್ಪು ಹಾಗೂ ಅಡುಗೆ ಸೋಡಾ ಹಾಕಿ ದಿನಕ್ಕೆ 6 ಬಾರಿ ಕುಡಿಸಬೇಕು, ಕೀಟಗಳ ಹಾವಳಿ ತಪ್ಪಿಸಲು ಹಸಿಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಈ ರೋಗವು ಸೊಳ್ಳೆ, ಉಣ್ಣೆ, ನೊಣ ಹಾಗೂ ಇತರೆ ಕೀಟಗಳಿಂದ ಮುಖ್ಯವಾಗಿ ಹರಡುವುದರಿಂದ ಕೊಟ್ಟಿಗೆಯ ಸುತ್ತಮುತ್ತ ಸ್ವಚ್ಚತೆ ಕಾಪಾಡಬೇಕು, ರೋಗಗ್ರಸ್ತ ಜಾನುವಾರು ಮರಣ ಹೊಂದಿದಲ್ಲಿ ಆಳವಾದ ಗುಂಡಿಯಲ್ಲಿ ಹೂಳಬೇಕು.
ಚರ್ಮಗಂಟು ರೋಗ ಸಾಂಕ್ರಾಮಿಕ ಖಾಯಿಲೆಯಾಗಿದ್ದು,ಕ್ಯಾಪ್ರಿಫಾಕ್ಸ್ ಎಂಬ ವೈರಾಣುವಿನಿಂದ ಬರುತ್ತದೆ.ದನ ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ , ಕರುಗಳಲ್ಲಿ ಅತಿ ಹೆಚ್ಚಾಗಿ ಹಾಗೂ ತೀಕ್ಷ್ಣವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಮುಖ್ಯವಾಗಿ ದನಗಳಿಗೆ ಕಚ್ಚುವ ಕೀಟಗಳಿಂದ (ಸೊಳ್ಳೆ ,ನೊಣ , ಉಣ್ಣೆ ) ಬಹುಬೇಗ ಹರಡುತ್ತದೆ , ಮಳೆಗಾಲದಲ್ಲಿ ಮತ್ತು ನಂತರದ ದಿನಗಳಲ್ಲಿ ಹೆಚ್ಚಾಗಿ ಈ ರೋಗವು ಪಸರಿಸುತ್ತದೆ..
ಡಾ.ಸಿದ್ದನಗೌಡ , ಪಶು ಇಲಾಖೆಯ ಸಹಾಯಕ ನಿರ್ದೇಶಕರು, ಕೊರಟಗೆರೆ.
ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz