ತಿಪಟೂರು: ಮನುಷ್ಯರಲ್ಲಿ ಇರುವ ಅಸಮಾನತೆ ಜಾತಿ ವ್ಯವಸ್ಥೆಯನ್ನು ಕೊನೆಗಾಣಿಸಬೇಕೆಂದು ಡಾ.ಬಿ.ಆರ್. ಅಂಬೇಡ್ಕರ್ ಅವಿರತವಾಗಿ ಶ್ರಮಿಸಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ತಿಪಟೂರು ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ನಗರಸಭೆ ಏರ್ಪಡಿಸಿದ ಡಾ.ಬಿಆರ್ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾವ್ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಿ ಎಲ್ಲರೂ ಒಂದೇ ಎಂಬ ಸಮಾನತೆ ಮೂಡಿಸಬೇಕೆಂದು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ ಜಾತ್ಯತೀತ ವ್ಯಕ್ತಿ ಅಂಬೇಡ್ಕರ್ ಎಂದು ಸಚಿವರು ತಿಳಿಸಿದರು.
ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ಇಡೀ ದೇಶದ ಪ್ರಜೆಗಳಿಗೆ ಹಕ್ಕುಗಳನ್ನು ತಿಳಿಸಿ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಿದರು. ಇಂತಹವರ ವಿಚಾರಧಾರೆಗಳು ಪ್ರಸ್ತುತವಾಗಿದ್ದು, ಪ್ರತಿಯೊಬ್ಬರು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಉಪನ್ಯಾಸ ನೀಡಿದ ರೇಣುಕಯ್ಯ, ಡಾ. ಅಂಬೇಡ್ಕರ್ ಅವರು, ನಮ್ಮ ದೇಶದ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಪೂರಕವಾದ ಸಂವಿಧಾನವನ್ನು ರಚಿಸುವ ಮೂಲಕ ಜಗತ್ತಿಗೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದರು ಎಂದರು.
ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ದಿಗ್ವಿಜಯ ಬೋರ್ಡ್ ಕೆ.ತಹಸೀಲ್ದಾರ್ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ದಿನೇಶ್, ನಗರಸಭೆ ಅಧ್ಯಕ್ಷ ರಾಮಮೋಹನ್, ಪೌರಾಯುಕ್ತ ಉಮಾಕಾಂತ್, ನಗರಸಭೆ ಉಪಾಧ್ಯಕ್ಷ ಗಣೇಶ್ ಸಮಾಜದ ಮುಖಂಡರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ತಿಪಟೂರು ಕೆಂಪಮ್ಮ ದೇವಸ್ಥಾನದಿಂದ ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ತಿಪಟೂರು ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಿಂದ ತರಲಾಯಿತು. ಡೊಳ್ಳು ಕುಣಿತ ಜಾನಪದ ಕಲಾತಂಡ ದೊಂದಿಗೆ ನೌಕರರ ಭವನದವರೆಗೆ ಮೆರವಣಿಗೆ ನಡೆಸಲಾಯಿತು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5