ಜೆಡಿಎಸ್ ಪಕ್ಷ ಇರುವುದೇ ಐದಾರು ಜಿಲ್ಲೆಗಳಲ್ಲಿ. ಕುಮಾರಸ್ವಾಮಿ ಅವರು ತಮಟೆ ಹೊಡೆದುಕೊಂಡು ಪಂಚರತ್ನ ಯಾತ್ರೆ ಎಂದು ಓಡಾಡುತ್ತಿದ್ದಾರೆ. ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ಯಾಕೆ ಪಂಚರತ್ನ ಯೋಜನೆ ಮಾಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಜೆಡಿಎಸ್ ನ ಪಂಚರತ್ನ ಯಾತ್ರೆ ವಿಚಾರವಾಗಿ ಹಾಸನದಲ್ಲಿ ನಡೆದ “ಪ್ರಜಾಧ್ವನಿ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಮತ್ತೆ ಅಧಿಕಾರ ಕೊಡಬೇಕಂತೆ, ಇಲ್ಲದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತಾರಂತೆ. ಜೆಡಿಎಸ್ ನವರು ಗೆದ್ದ ಎತ್ತಿನ ಬಾಲ ಹಿಡಿಯುವವರು, ಅವರು ಯಾವತ್ತೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲ್ಲ. ನಿಮ್ಮ ಮತಗಳನ್ನು ದಯವಿಟ್ಟು ವ್ಯರ್ಥ ಮಾಡಿಕೊಳ್ಳಬೇಡಿ. ಜೆಡಿಎಸ್ ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ. ದಯಮಾಡಿ ಜೆಡಿಎಸ್ ಪಕ್ಷಕ್ಕೆ ಮತ ನೀಡಬೇಡಿ. ಬಿಜೆಪಿ ಮತ್ತು ಜೆಡಿಎಸ್ ನವರಿಂದ ರಾಜ್ಯ ಉದ್ಧಾರವಾಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಬಸವಜಯಂತಿ ದಿನ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ, ನೇರವಾಗಿ ವಿಧಾನಸೌಧದ ಕ್ಯಾಬಿನೆಟ್ ಹಾಲ್ ಗೆ ಹೋಗಿ ನಮ್ಮ 5 ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿದ್ದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಬಡವರ ಸಾಲಮನ್ನಾ ಮತ್ತು ಕೃಷಿಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದೆ. ನಾವು 2 ಲಕ್ಷ ಕೃಷಿ ಹೊಂಡಗಳನ್ನು ತೋಡಿಸಿದ್ದೆವು, ಬೊಮ್ಮಾಯಿ ಸರ್ಕಾರ ಇದನ್ನು ನಿಲ್ಲಿಸಿದೆ, ವಿದ್ಯಾಸಿರಿ, ಕೃಷಿಭಾಗ್ಯ, ಮೈತ್ರಿ, ಮನಸ್ವಿನಿ, ಶಾದಿಭಾಗ್ಯ, ಇಂದಿರಾಕ್ಯಾಂಟೀನ್ ಈ ಎಲ್ಲಾ ಯೋಜನೆಗಳನ್ನು ಬಂದ್ ಮಾಡಿದ್ದಾರೆ. ಇಂಥಾ ಸರ್ಕಾರ ಬೇಕಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಹಾಸನದಲ್ಲಿ 7 ರಲ್ಲಿ ಕನಿಷ್ಠ 5 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಪಣತೊಡಬೇಕು. ಜಿಲ್ಲೆಯ ಎಲ್ಲಾ ಮುಖಂಡರು ಒಂದಾಗಿ ಕೆಲಸ ಮಾಡಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಬೇಕು. ಮಧು ಮಾದೇಗೌಡ ಅವರು ಈ ಬಾರಿ ಮೇಲ್ಮನೆ ಸದಸ್ಯರಾಗಿದ್ದಾರೆ, ಇಲ್ಲಿ ಕಾಂಗ್ರೆಸ್ ಗೆ ಶಕ್ತಿ ಇದೆ. ಜನ ಧೈರ್ಯವಾಗಿ ಕಾಂಗ್ರೆಸ್ ಪರ ಹೋರಾಟ ಮಾಡಿದರೆ ಖಂಡಿತಾ ನಾವು ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


