ದೇವೇಗೌಡರ ಜೆಡಿಎಸ್ ಬಹುದಿನಗಳ ಸಂಧಾನದ ನಂತರ ಎನ್ ಡಿಎ ಸೇರಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ನೆನ್ನೆ ಸಂಜೆ ಎನ್ ಡಿಎ ಸೇರುವ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ದೆಹಲಿಗೆ ಆಗಮಿಸಿದ ಅವರು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿದರು. ಎನ್ ಡಿಎ ಮೈತ್ರಿಕೂಟಕ್ಕೆ ಸೇರಲು ನಿರ್ಧರಿಸಲಾಗಿದ್ದು, ಲೋಕಸಭೆಗೆ ಸೀಟು ಹಂಚಿಕೆ ಕುರಿತು ಚರ್ಚಿಸಲಾಗಿದೆ ಎಂದು ಕುಮಾರಸ್ವಾಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಿಂದಿನ ದಿನ ದೇವೇಗೌಡರು ದೆಹಲಿಗೆ ಆಗಮಿಸಿ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಚರ್ಚೆಯಲ್ಲಿ ಭಾಗವಹಿಸಿದ್ದರು. ಜೆಡಿಎಸ್ ಈಗ ಎನ್ ಡಿಎ ಭಾಗವಾಗಿದೆ ಎಂದು ಜೆಪಿ ನಡ್ಡಾ ಎಕ್ಸ್ ಮೂಲಕ ಮಾಹಿತಿ ನೀಡಿದ್ದರು.
‘ಜೆಡಿಎಸ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಭಾಗವಾಗಲು ನಿರ್ಧರಿಸಿರುವುದು ಸಂತಸ ತಂದಿದೆ. ನಾವು ಅವರನ್ನು ಹೃತ್ಪೂರ್ವಕವಾಗಿ ಎನ್‌ಡಿಎಗೆ ಸ್ವಾಗತಿಸುತ್ತೇವೆ. ಈ ಮೈತ್ರಿ ಎನ್ ಡಿಎಯನ್ನು ಮತ್ತೆ ಬಲಪಡಿಸಲಿದೆ’ ಎಂದು ಜೆಪಿ ನಡ್ಡಾ ಹೇಳಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಜೆಡಿಎಸ್ ಬಿಜೆಪಿಗೆ ಹತ್ತಿರವಾಯಿತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮೈತ್ರಿ ಮಾತುಕತೆಗೆ ಚಾಲನೆ ನೀಡಿದರು. ಎರಡೂ ಪಕ್ಷಗಳು ಮೈತ್ರಿಯಾಗಿ ಲೋಕಸಭೆಯಲ್ಲಿ ಸ್ಪರ್ಧಿಸಲಿವೆ.


